ಹುಬ್ಬಳ್ಳಿಯಲ್ಲಿ ಏರುತ್ತಿರುವ ಬಿಸಿಲಿನ ತೀವ್ರತೆ ಇದೀಗ ಆರೋಗ್ಯ ಸೇವಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದ್ದು, ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಬೇಸಿಗೆಯ ಬಿಸಿಲಿನಿಂದಾಗಿ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿದಿರುವುದು ಸಂಗ್ರಹ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ನಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರತಿದಿನ ಸುಮಾರು 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಪ್ರಸ್ತುತ ಈ ಸಂಖ್ಯೆ ಕೇವಲ 10 ರಿಂದ 15 ಯೂನಿಟ್ಗಳಿಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಆಸ್ಪತ್ರೆಗಳಲ್ಲಿನ ರಕ್ತದ ಬೇಡಿಕೆ ಪೂರೈಸುವುದು ಸವಾಲಾಗಿ ಪರಿಣಮಿಸಿದೆ.
ಬಿಸಿಲಿನ ತಾಪದಲ್ಲಿ ರಕ್ತದಾನ ಮಾಡಿದರೆ ದೌರ್ಬಲ್ಯ, ತಲೆಸುತ್ತು ಉಂಟಾಗಬಹುದು ಎಂಬ ಭಯದಿಂದ ಅನೇಕರು ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಆದರೆ ರಕ್ತದ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ರಕ್ತದಾನ ಸುರಕ್ಷಿತವಾಗಿದೆ ಎಂದು ಬ್ಲಡ್ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ದಾನ ಮಾಡಿದ ಬಳಿಕ ಸೂಕ್ತ ವಿಶ್ರಾಂತಿ ಪಡೆದರೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಯುವಕರು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಈ ರೀತಿಯ ರಕ್ತ ಕೊರತೆ ಸಮಸ್ಯೆ ಕಂಡುಬರುತ್ತಿದ್ದು, ನಿರಂತರ ರಕ್ತದಾನ ಶಿಬಿರಗಳು ಅಗತ್ಯವಾಗಿದೆ ಎಂದು ಆರೋಗ್ಯ ವಲಯದವರು ಅಭಿಪ್ರಾಯಪಟ್ಟಿದ್ದಾರೆ.
ಬಿಸಿಲಿನ ತೀವ್ರತೆ ಹೆಚ್ಚಿದ ಹಿನ್ನೆಲೆ ಹುಬ್ಬಳ್ಳಿಯ ರಕ್ತ ನಿಧಿಗಳಲ್ಲಿ ರಕ್ತದಾನಿಗಳ ಸಂಖ್ಯೆ ಇಳಿದು, ರಕ್ತ ಸಂಗ್ರಹದಲ್ಲಿ ತೀವ್ರ ಕೊರತೆ ಉಂಟಾಗಿದೆ.




