“ಸ್ವಲ್ಪ ಮಳೆ ಬಂದರೂ ಮುಳುಗುವ ಅಭಿವೃದ್ಧಿ” ಕಾಂಗ್ರೆಸ್ ಆಡಳಿತದ ಅವ್ಯವಸ್ಥೆಯ ಸ್ಪಷ್ಟ ಸಾಕ್ಷಿ: ಆರ್.ಅಶೋಕ್

Political News: ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಅಂಡರ್‌ಪಾಸ್‌ನಲ್ಲಿ ಸ್ವಲ್ಪ ಮಳೆ ಬಂದರೂ, ಅದು ನೀರಿನಿಂದ ತುಂಬಿ ವಾಹನ ಸಂಂಚಾರಕ್ಕೆ ಯೋಗ್ಯವಲ್ಲದ ಸ್ಥಳವಾಗುತ್ತದೆ. ಹಾಗಾಗಿ ಪೋಲೀಸರೇ ಅಲ್ಲಿ ಸಂಚಾರವನ್ನು ನಿರ್ಬಂಧಿಸುತ್ತಾರೆ.

ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೆ ಅಂಡರ್‌ಪಾಸ್ ಬಂದ್… ಇದೇನಾ “ಬ್ರಾಂಡ್ ಬೆಂಗಳೂರು” ಅಭಿವೃದ್ಧಿ? ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾದ ಅಂಡರ್‌ಪಾಸ್ ಸ್ವಲ್ಪ ಮಳೆಯಾದರೂ ನೀರಿನಿಂದ ತುಂಬಿ ವಾಹನ ಸಂಚಾರವೇ ಸ್ಥಗಿತಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯಿಲ್ಲದ ಯೋಜನೆಗಳಿಗೆ ಸ್ಪಷ್ಟ ಸಾಕ್ಷಿ ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ಟನಲ್ ಮಾಡುತ್ತೇನೆ, ಬ್ರಾಂಡ್ ಬೆಂಗಳೂರು ನಿರ್ಮಿಸುತ್ತೇನೆ” ಎಂದು ಹೇಳುವ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಟನಲ್ ಯೋಜನೆಗಳ ಭವಿಷ್ಯವೂ ಇದೇನಾ ಎಂದು ಜನತೆಗೆ ಸ್ಪಷ್ಟಪಡಿಸಿ. ಕಮಿಷನ್ ರಾಜಕಾರಣಕ್ಕೆ ಆದ್ಯತೆ ನೀಡಿ, ಜನರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಮರೆತ ಪರಿಣಾಮ ಇಂದು ಅಂಡರ್‌ಪಾಸ್‌ಗಳು ನೀರಿನಲ್ಲಿ ಮುಳುಗುತ್ತಿವೆ.

ಅಂಡರ್‌ಪಾಸ್‌ಗಳನ್ನು ಸರಿಯಾಗಿ ನಿರ್ವಹಿಸಲು ಆಗದ ಸರ್ಕಾರ, ಇಡೀ ಬೆಂಗಳೂರಿನ ಭವಿಷ್ಯವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದೆ? “ಸ್ವಲ್ಪ ಮಳೆ ಬಂದರೂ ಮುಳುಗುವ ಅಭಿವೃದ್ಧಿ” ಕಾಂಗ್ರೆಸ್ ಆಡಳಿತದ ಅವ್ಯವಸ್ಥೆಯ ಸ್ಪಷ್ಟ ಸಾಕ್ಷಿ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author