ಅಕ್ರಮ ವಲಸಿಗರ ಶಂಕೆ: ʼಯಾರ್ರೀ ಇವ್ರು.. ಎಲ್ಲಿಂದ ಬಂದಾರ? DCPಗಳ ಭರ್ಜರಿ ರೈಡ್!

ಅಕ್ರಮ ಬಾಂಗ್ಲಾ ವಲಸಿಗರ ನುಸುಳುವಿಕೆ ಆರೋಪ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ವಿಶೇಷ ತಪಾಸಣೆ ಕಾರ್ಯಾಚರಣೆ ಆರಂಭವಾಗಿದೆ.

ಹೊಸ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರನ್ನು ಪೊಲೀಸರು ದಾಖಲೆ ಪರಿಶೀಲನೆಗೆ ಒಳಪಡಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ರೈಲು ಮೂಲಕ ಆಗಮಿಸಿರುವ ಕೂಲಿ ಕಾರ್ಮಿಕರ ಗುರುತಿನ ದಾಖಲೆಗಳನ್ನು ವಿಶೇಷವಾಗಿ ಪರಿಶೀಲಿಸಲಾಗುತ್ತಿದ್ದು, ಕೆಲವರ ಚಲನವಲನ ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ಮತ್ತಷ್ಟು ತೀವ್ರಗೊಳಿಸಲಾಗಿದೆ.

ಶಾಲಿಮಾರ್–ಅಮರವತಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬಂದ ಕಾರ್ಮಿಕರು ಹುಬ್ಬಳ್ಳಿಯಿಂದ ವಿವಿಧ ಜಿಲ್ಲೆಗಳತ್ತ ತೆರಳುತ್ತಿದ್ದ ಸಂದರ್ಭದಲ್ಲೇ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಧಾರ್ ಸೇರಿದಂತೆ ವಿವಿಧ ಗುರುತಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಯಾವುದೇ ಅನುಮಾನಾಸ್ಪದ ಪ್ರಕರಣ ಕಂಡುಬಂದರೆ ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕ್ರೈಮ್ ಡಿಸಿಪಿ ರವೀಶ್ ಆರ್ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ಶೃತಿ ಅವರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ತಂಡಗಳ ಸಹಯೋಗದಲ್ಲಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ಮುಂದುವರಿದಿದೆ.

ಈ ನಡುವೆ ಕೆಲ ಸಂಘಟನೆಗಳು ಈ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ. ಸದ್ಯ ಹುಬ್ಬಳ್ಳಿಯಲ್ಲಿ ಪೊಲೀಸ್ ತಪಾಸಣೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಪೊಲೀಸರು ನಿಗಾವಹಿಸುತ್ತಿದ್ದಾರೆ.

About The Author