Hubli News: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಿದ್ಯಾರ್ಥಿಗಳ ಪಿಜಿಗಳನ್ನು ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ ನೀಡಿ ಲ್ಯಾಪ್ಟಾಪ್ ಕಳವು ಮಾಡುತ್ತಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ಬಿವಿಬಿ ಕಾಲೇಜು ಸುತ್ತಮುತ್ತಲಿನ ವಿದ್ಯಾರ್ಥಿಗಳ ಪಿಜಿಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿದ್ದವು. ವಿದ್ಯಾರ್ಥಿಗಳಂತೆ ಹಾಡಹಗಲೇ ಪಿಜಿಗಳಿಗೆ ಪ್ರವೇಶ ಮಾಡುತ್ತಿದ್ದ ಆರೋಪಿಗಳು, ಸೆಕ್ಯೂರಿಟಿ ಸಿಬ್ಬಂದಿ ಕಣ್ಣಿಗೆ ಮಣ್ಣು ಎರಚಿ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.
ಒಟ್ಟು 9 ಲ್ಯಾಪ್ಟಾಪ್ಗಳನ್ನು ಕಳವು ಮಾಡಿದ್ದ ಪ್ರಕರಣ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಮೊಬೈಲ್ ಟ್ರ್ಯಾಕಿಂಗ್ ಆಧರಿಸಿ ಆಂಧ್ರಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು, ಅಂತರ ಜಿಲ್ಲಾ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸತ್ಯವೇಲು ಚೌಡೇಪಲ್ಲಿ ಹಾಗೂ ಸರವಣ ಚೌಡೇಪಲ್ಲಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ 5.40 ಲಕ್ಷ ರೂಪಾಯಿ ಮೌಲ್ಯದ 6 ಲ್ಯಾಪ್ಟಾಪ್ಗಳು ಹಾಗೂ 12 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿಗಳ ಪ್ರದೇಶಗಳಲ್ಲಿ ಹೆಚ್ಚಾಗಿದ್ದ ಕಳ್ಳತನ ಪ್ರಕರಣಗಳಿಗೆ ವಿದ್ಯಾನಗರ ಪೊಲೀಸರು ಬ್ರೇಕ್ ಹಾಕಿದ್ದು, ಪ್ರಕರಣ ಭೇದಿಸಿದ ತಂಡಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Sangamesh Sattigeri, Karnataka TV, Hubballi




