Hubli News: ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
2007ರಲ್ಲಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದ ಚನ್ನಪ್ಪ ರೇವಣಪ್ಪ ಸಂಗೊಳ್ಳಿ, ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ. ಇದೀಗ ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ನ್ಯಾಯಾಲಯದಿಂದ ಓಪನ್ ವಾರಂಟ್ ಜಾರಿಯಾಗಿದ್ದ ಹಿನ್ನೆಲೆ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು.
ಸಂಬಂಧಿಕರ ಮೊಬೈಲ್ ಸಂಖ್ಯೆಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಆರೋಪಿಯು ಕುರ್ತಕೋಟಿ ಗ್ರಾಮದಲ್ಲಿ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಜೂನ್ 1ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದು, ತಂಡಕ್ಕೆ ಬಹುಮಾನ ಮಂಜೂರು ಮಾಡಿದ್ದಾರೆ.




