ಪಕ್ಕದ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಬದಲು ಬಿಜೆಪಿ ತಮ್ಮ ತನುವ ಸಂತೈಸಿಕೊಳ್ಳಲಿ: ಪ್ರಿಯಾಂಕ್

Political News: ಕಾಂಗ್ರೆಸ್ ಪಕ್ಷ ದಲಿತ ನಾಯಕರನ್ನು ಸಿಎಂ ಮಾಡುತ್ತೇವೆಂದು ಹೇಳಿ ಆಸೆ ತೋರಿಸಿ, ಈಗ ಮೋಸ ಮಾಡುತ್ತಿದೆ ಎಂದು ಹಲವು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಸಾಲು ಸಾಲು ಆರೋಪ ಮಾಡಿ, ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಬಿಜೆಪಿಗರ ವಿರುದ್ಧ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಗರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ, ಕಾಳಜಿ ಬಂದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕರಿಗೆ ಈಗ ಏಕಾಏಕಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕಾಳಜಿ ಬಂದುಬಿಟ್ಟಿದೆ. ಕಾಲ, ಸಂದರ್ಭ ಮತ್ತು ಪರಿಸ್ಥಿತಿಗೆ ತಕ್ಕಂತೆ ಮಾತು ಬದಲಿಸುವುದು, ಸಿದ್ದಾಂತ ಬದಲಿಸುವುದು, ವರಸೆ ಬದಲಿಸುವುದು ಬಿಜೆಪಿಗರಿಗೆ ದೇವರು ನೀಡಿದ ವರ ಇರಬಹುದೇನೋ! ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಗಳನ್ನಿಟ್ಟುಕೊಂಡು, ದಲಿತರಿಗೆ ಅನ್ಯಾಯ, ಒಬಿಸಿಗಳಿಗೆ ಅನ್ಯಾಯ ಎನ್ನುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ತಮ್ಮ ಆತ್ಮಸಾಕ್ಷಿಗೆ ಕೆಲ ಪ್ರಶ್ನೆಗಳನ್ನು ಕೇಳಿಕೊಂಡು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.

ಬಿಜೆಪಿಗೆ ಅಧಿಕಾರ ಸಿಕ್ಕಾಗ ಒಬಿಸಿ, ದಲಿತರ ರಾಜಕೀಯ ಪ್ರಾತಿನಿಧ್ಯ ಏಕೆ ನೆನಪಾಗಲಿಲ್ಲ? ರಾಜ್ಯದಲ್ಲಿ ಬಿಜೆಪಿಯಿಂದ ಆಗಿರುವ ನಾಲ್ಕು ಮುಖ್ಯಮಂತ್ರಿಗಳಲ್ಲಿ ಎಷ್ಟು ಜನ ಒಬಿಸಿ, ದಲಿತರಿದ್ದಾರೆ? ಮುಖ್ಯಮಂತ್ರಿಯಾಗಲು ಬಿಜೆಪಿ ಈ ಸಮುದಾಯಗಳ ನಾಯಕರನ್ನು ಬೆಳಸಲಿಲ್ಲವೇ ಅಥವಾ ಇರುವ ನಾಯಕರಿಗೆ ಅರ್ಹತೆ ಇಲ್ಲ ಎಂದು ತೀರ್ಮಾನಿಸಿದೆಯೇ? ಎಂದು ಪ್ರಿಯಾಂಕ್ ಬಿಜೆಪಿಗರಿಗೆ ಪ್ರಶ್ನಿಸಿದ್ದಾರೆ.

ಅಧಿಕಾರವಿದ್ದಾಗಿನ ಕತೆ ಆಯಿತು, ಈಗಲಾದರೂ ದಲಿತ, ಒಬಿಸಿಗಳು ನೆನಪಾಗಲಿಲ್ಲವೇ? ವಿಧಾನಸಭೆ ವಿಪಕ್ಷ ನಾಯಕನ ಸ್ಥಾನವನ್ನು ಏಕೆ ಒಬಿಸಿ ಸಮುದಾಯದವರಿಗೆ ಕೊಡಲಿಲ್ಲ? ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ಏಕೆ ಕೊಡಲಿಲ್ಲ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಹುದ್ದೆಯನ್ನು ದಲಿತರೊಬ್ಬರಿಗೆ ಬಿಟ್ಟುಕೊಡಲು ತಯಾರಿದ್ದಾರಾ? ವಿಪಕ್ಷ ನಾಯಕರು ತಮ್ಮ ಸ್ಥಾನವನ್ನು ಒಬಿಸಿ ಸಮುದಾಯಕ್ಕೆ ತ್ಯಾಗ ಮಾಡಲು ತಯಾರಿದ್ದಾರಾ?

ದಲಿತ, ಒಬಿಸಿ ಸಮುದಾಯಗಳಿಗೆ ಜಗನ್ನಾಥ ಭವನದ ಹೊಸ್ತಿಲನ್ನು ದಾಟಲು ಬಿಡದ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ನ್ಯಾಯ, ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಪಾಠ ಮಾಡುವ ಅಗತ್ಯವಿಲ್ಲ ಎಂದು ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಪಕ್ಷ ಹಿಂದುಳಿದ ನಾಯಕರಿಗಾಗಿ ಏನೇನು ಮಾಡಿದೆ ಎಂದು ಹೇಳಿದ್ದಾರೆ.

◆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದ ಅತಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಗಳಾಗಿ ದಾಖಲೆ ನಿರ್ಮಿಸಿದ ಶ್ರೀ ದೇವರಾಜ್ ಅರಸು, ಶ್ರೀ ಸಿದ್ದರಾಮಯ್ಯ ಇಬ್ಬರು ಮುಖ್ಯಮಂತ್ರಿಗಳು ಒಬಿಸಿ ಸಮುದಾಯದವರೇ.

◆ ಕಾಂಗ್ರೆಸ್ ಪಕ್ಷ ನಾಲ್ಕು ಹಿಂದುಳಿದ ವರ್ಗಗಳ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದೆ.

◆ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದವರಾದ ಶ್ರೀ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಪಕ್ಷದಿಂದಲೇ.

◆ ಶ್ರೀ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿ ಹಿಂದುಳಿದ ವರ್ಗದ ನೇತಾರರಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷದಲ್ಲೇ.

◆ ಶೋಷಿತ ಸಮುದಾಯದಿಂದ ಬಂದಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಕಾಂಗ್ರೆಸ್ ಪಕ್ಷದಲ್ಲೇ.

ಪಕ್ಕದ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಬದಲು ಬಿಜೆಪಿ ತಮ್ಮ ತನುವ ಸಂತೈಸಿಕೊಳ್ಳಲಿ, ತಮ್ಮ ಮನೆಯ ಸಂಬಾಳಿಸಿಕೊಳ್ಳಲಿ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

About The Author