Political News: RSS ನೋಂದಣಿ ಬಗ್ಗೆ ಪ್ರಶ್ನಿಸಿ ಪತ್ರ ಬರೆದ ಸಚಿವ ಖರ್ಗೆ: ಪ್ರಶ್ನೆಗೆ ಭಾಗವತರ ತಿರುಗೇಟು

Political News: ಆರ್‌ಎಸ್‌ಎಸ್‌ ಸಂಘಟನೆ ಇದುವರೆಗೂ ಯಾಕೆ ನೋಂದಣಿಯಾಗಿಲ್ಲವೆಂದು ಸ್ಪಷ್ಟನೆ ಕೇಳಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದರು. ಆದರೆ ಅದಕ್ಕೂ ಮುನ್ನವೇ ಈ ವಿಷಯದ ಬಗ್ಗೆ ಭಾಗವತ್ ಅವರು ಈ ಬಗ್ಗೆ ಮಾತನಾಡಿದ ವೀಡಿಯೋ ವೈರಲ್ ಆಗಿದೆ.
ಗೃಹ ಸಚಿವರು ಬರೆದ ಪತ್ರ ಇಂತಿದೆ.
ಮಾನ್ಯ ಶ್ರೀ ಮೋಹನ್ ಭಾಗವತ್ ಅವರೇ, ನನ್ನ ಪತ್ರ ಶೀಘ್ರದಲ್ಲೇ ನಿಮಗೆ ತಲುಪಲಿದೆ. ಆದರೆ, ಈ ವಿಷಯದ ಕುರಿತು ಮೊದಲು ನಿಮ್ಮ ಗಮನಕ್ಕೆ ತರುವುದು ಮುಖ್ಯ ಎಂದು ನಾನು ಭಾವಿಸಿದ್ದೇನೆ.
ಮೊದಲನೆಯದಾಗಿ, 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಆರ್‌ಎಸ್‌ಎಸ್‌ಗೆ ಅಭಿನಂದನೆಗಳು.
60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಸಂಸ್ಥೆಯಾದ RSS ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಪಾಲಿಸಬೇಕಾಗಿದೆ.
ಆರ್‌ಎಸ್‌ಎಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಬಿಡುಗಡೆ ಮಾಡಿದ 2025-26ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ವಾರದ ಸಾಪ್ತಾಹಿಕ ಸಭೆಗಳು ಮತ್ತು 60 ಮಾಸಿಕ ಮಂಡಳಿಗಳನ್ನು ನಡೆಸಿದ್ದು, 19.61 ಲಕ್ಷ ಮಂದಿ ಭಾಗವಹಿಸುವುದರೊಂದಿಗೆ 2,194 ಸಮಾಜೋತ್ಸವಗಳನ್ನು ಆಯೋಜಿಸಿದೆ ಮತ್ತು ರಾಜ್ಯದಲ್ಲಿ 2.21 ಲಕ್ಷ ಸಮವಸ್ತ್ರಧಾರಿಗಳೊಂದಿಗೆ 562 ಪಥಸಂಚಲವನ್ನು ನಡೆಸಿದೆ.
ಇಂತಹ ದೊಡ್ಡ ಮಟ್ಟದ ಪ್ರಭಾವ ಮತ್ತು ವ್ಯಾಪಕತೆಯನ್ನು ಹೊಂದಿರುವ RSS, ತನ್ನ ಕಾನೂನುಬದ್ಧ ಸ್ಥಾನಮಾನ, ನೋಂದಣಿ, ಪದಾಧಿಕಾರಿಗಳು, ಹಣಕಾಸಿನ ಮೂಲಗಳು, ವೆಚ್ಚ, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳಿಗೆ ಅನುಮತಿ ಕುರಿತು ಸ್ಪಷ್ಟನೆ ನೀಡಬೇಕಾಗಿದೆ.
ನಾಗರಿಕರು, ಕಾರ್ಮಿಕರು, ಎನ್‌ಜಿಒಗಳು, ಟ್ರಸ್ಟ್‌ಗಳು, ದೇವಾಲಯಗಳು ಮತ್ತು ಕಂಪನಿಗಳಿಂದ ನೋಂದಣಿ, ವಿವರ ಬಹಿರಂಗ ಮತ್ತು ಕಾನೂನಿನ ಪರಿಪಾಲನೆಯನ್ನು ನಿರೀಕ್ಷಿಸಿರುವಾಗ, RSS ಮಾತ್ರ ಏಕೆ ವಿನಾಯಿತಿ ಪಡೆಯಬೇಕು?
ತನ್ನ ಶತಮಾನೋತ್ಸವದ ಸಂದರ್ಭದಲ್ಲಿ RSS ಸಂವಿಧಾನಕ್ಕೆ ಬದ್ಧರಾಗುವ ಹೊಣೆಗಾರಿಕೆ ಮೆರೆಯಬೇಕು ಹಾಗೂ ನೋಂದಣಿ, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಗಳನ್ನು ಬಹಿರಂಗಪಡಿಸಬೇಕು, ಅನ್ವಯಿಸುವ ತೆರಿಗೆಗಳನ್ನು ಪಾವತಿಸಬೇಕು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.
ನನ್ನ ಪತ್ರದಲ್ಲಿ ಹೇಳಿರುವಂತೆ, ಆರ್‌ಎಸ್‌ಎಸ್‌ನಿಂದ ಶೀಘ್ರದಲ್ಲಿಯೇ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಲ್ಲಿದ್ದೇನೆ.
ಈ ರೀತಿಯಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭಾಗವತ್ ಅವರಿಗೆ ಪತ್ರ ಬರೆದಿದ್ದರು. ಆದರೆ ಅದಕ್ಕೂ ಮುನ್ನವೇ ಭಾಗವತ್ ಅವರು ಈ ಬಗ್ಗೆ ಮಾತನಾಡಿದ ವೀಡಿಯೋ ವೈರಲ್ ಆಗಿದೆ. ನಾನ್ಯಾಕೆ ಈ ಬಗ್ಗೆ ಸ್ಪಷ್ಟತೆ ನೀಡಲಿ ಎಂದು ಭಾಗವತ್ ಪ್ರತಿಕ್ರಿಯಿಸಿದ್ದು, ಹಿಂದೂ ಧರ್ಮವೇ ನೋಂದಣಿಯಾಗಿಲ್ಲ. ಇನ್ನು ಆರ್‌ಎಸ್‌ಎಸ್‌ ನೋಂದಣಿಯಾಕಾಗಬೇಕು ಎಂದು ಭಾಗವತ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರ್ಎಸ್‌ಎಸ್‌ ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

About The Author