Hubli News: 250 ಕೋಟಿ ವಂತಿಗೆ ಬಾಕಿ; ನಿರಂತರ ನೀರು ಯೋಜನೆಗೆ ಹಿನ್ನಡೆ

Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ವಿಶ್ವಬ್ಯಾಂಕ್ ನೆರವಿನ ನಿರಂತರ ನೀರು ಸರಬರಾಜು ಯೋಜನೆಗೆ ಪಾವತಿಸಬೇಕಿರುವ 250 ಕೋಟಿಗೂ ಅಧಿಕ ವಂತಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ಯೋಜನೆಯ ಅನುಷ್ಠಾನ ಹಾಗೂ ಕಾಮಗಾರಿ ಪ್ರಗತಿಗೆ ಹಿನ್ನಡೆಯಾಗಿರುವುದು ಬೆಳಕಿಗೆ ಬಂದಿದೆ.

ಅವಳಿ ನಗರದಲ್ಲಿ ಜಾರಿಯಲ್ಲಿರುವ ವಿಶ್ವಬ್ಯಾಂಕ್ ನೆರವಿನ ನಿರಂತರ ನೀರು ಸರಬರಾಜು ಯೋಜನೆಗೆ ಪಾಲಿಕೆ ತನ್ನ ಪಾಲಿನ ವಂತಿಗೆ ಹಣವನ್ನು ಸಂಪೂರ್ಣವಾಗಿ ಪಾವತಿಸಿಲ್ಲ.

ಒಟ್ಟು 1206.97 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಮಹಾನಗರ ಪಾಲಿಕೆಯ ಪಾಲಿನ ವಂತಿಗೆ 336.90 ಕೋಟಿ ರೂಪಾಯಿಯಾಗಿದ್ದು, ಇದರಲ್ಲಿ 250.51 ಕೋಟಿ ರೂಪಾಯಿ ಇನ್ನೂ ಬಾಕಿ ಉಳಿದಿದೆ.

2020-21ನೇ ಸಾಲಿನಲ್ಲಿ 33.66 ಕೋಟಿ ರೂಪಾಯಿ ಹಾಗೂ 2021-22ನೇ ಸಾಲಿನಲ್ಲಿ 52.43 ಕೋಟಿ ರೂಪಾಯಿ ಪಾವತಿಸಲಾಗಿತ್ತು. ಆದರೆ 2022-23ರಿಂದ ಇದುವರೆಗೆ ಯಾವುದೇ ಹಣ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಪಾಲಿಕೆಯ ವಂತಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ನಿರಂತರ ನೀರು ಯೋಜನೆಯ ಕಾಮಗಾರಿ ಪ್ರಗತಿಗೂ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.

2021-22ನೇ ಸಾಲಿನಲ್ಲಿ ಪಾವತಿಸಬೇಕಿದ್ದ ಮೊತ್ತದಲ್ಲಿ 31.72 ಕೋಟಿ ರೂಪಾಯಿ ಬಾಕಿ ಉಳಿದಿತ್ತು. ನಂತರದ ಮೂರು ಆರ್ಥಿಕ ವರ್ಷಗಳಲ್ಲಿ ಪಾವತಿಸಬೇಕಿದ್ದ ಕೋಟ್ಯಂತರ ರೂಪಾಯಿ ವಂತಿಗೆಯೂ ಇನ್ನೂ ಸಂದಾಯವಾಗಿಲ್ಲ.

ಪ್ರತಿ ವರ್ಷದ ಕಾಮಗಾರಿ ಪ್ರಗತಿಗೆ ಅನುಗುಣವಾಗಿ ವಂತಿಗೆ ಹಣ ಪಾವತಿಸಬೇಕಿದ್ದರೂ, ಅದನ್ನು ಪಾಲಿಕೆ ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಅವಳಿ ನಗರದ ಬಹುನಿರೀಕ್ಷಿತ ನಿರಂತರ ನೀರು ಸರಬರಾಜು ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಎದುರಾಗಿದೆ.

ಕ್ಯಾಮೆರ ಪರ್ಸನ್ ಹೇಮಂತ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author