ಘೋಷಣೆ ಮಾಡಿ ವಾರ ಕಳೆದರೂ ಇನ್ನೂ ಸಿಕ್ಕಿಲ್ಲ ಫ್ರೀ ಬಸ್‌ಪಾಸ್ ಮತ್ತು ಶೂ: ಬಿಜೆಪಿ ನಾಯಕರ ಅಸಮಾಧಾನ

Political News: ರಾಜ್ಯ ಸರ್ಕಾರದಲ್ಲಿ ಸದ್ಯ ಡಿಕೆ ಆಡಳಿತ ಶುರುವಾಗಿದೆ. ವಾರದ ಹಿಂದೆ ಡಿ.ಕೆ.ಶಿವಕುಮಾರ್ ನೂತನ ಸಿಎಂ ಆಗಿ ಆಡಳಿತ ವಹಿಸಿದ್ದು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಮತ್ತು ಶೂ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಮಕ್ಕಳಿಗೆ ಫ್ರೀ ಬಸ್‌ಪಾಸ್ ಮತ್ತು ಶೂ ಸಿಗಲಿಲ್ಲ. ಹೀಗಾಗಿ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹರಿಹಾಯ್ದಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಅವೈಜ್ಞಾನಿಕ ಗ್ಯಾರಂಟಿಗಳ ಹೆಸರಲ್ಲಿ ಖಜಾನೆಯನ್ನು ದಿವಾಳಿಯೆಬ್ಬಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಶಾಲೆ ಆರಂಭಗೊಂಡು ಎರಡು ವಾರಗಳು ಕಳೆದರೂ ಮಕ್ಕಳಿಗೆ ಶೂ – ಸಾಕ್ಸ್ ಪೂರೈಸಲು ಸಾಧ್ಯವಾಗಿಲ್ಲ. ಅದೆಷ್ಟೋ ಬಡ ಕುಟುಂಬಗಳ ಮಕ್ಕಳು ಬರಿಗಾಲಿನಲ್ಲಿ ನಡೆಯುವ ಪರಿಸ್ಥಿತಿಯಲ್ಲಿದ್ದು, ಸರ್ಕಾರದ ಶೂ – ಸಾಕ್ಸ್ ಯಾವಾಗ ಬರುವುದೋ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಎಂದಿನಂತೆ, ಮಕ್ಕಳ ಕುರಿತು ಸರ್ಕಾರದ ದಿವ್ಯ ನಿರ್ಲಕ್ಷ್ಯ ಮುಂದುವರಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಲ್ಲ ಮಕ್ಕಳಿಗೂ ಉಚಿತ ಬಸ್ ಪಾಸ್ ನೀಡುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ಕೇವಲ ಭರವಸೆಯಾಗಷ್ಟೇ ಉಳಿದಿದೆ. ಮಕ್ಕಳಿಗೆ ಬಸ್ ಪಾಸ್ ಪೂರೈಸುವ ಆರ್ಥಿಕ ಸಾಮರ್ಥ್ಯವೂ ಇಲ್ಲದಂತೆ ರಾಜ್ಯದ ಬೊಕ್ಕಸವನ್ನು ದಿವಾಳಿಯೆಬ್ಬಿಸಿದ್ದು ಕಳೆದ ಮೂರು ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಸಾಧನೆ! ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.

ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಕೈಗೆ ಪಾಸ್‌ ಇಲ್ಲ, ಕಾಲಿಗೆ ಶೂ ಇಲ್ಲ! ಖಜಾನೆ ಖಾಲಿ ಮಾಡಿಕೊಂಡು ಕೂತ ದರಿದ್ರ ಕಾಂಗ್ರೆಸ್ ಸರ್ಕಾರ, ಬಡ ಮಕ್ಕಳು ಬರಿಗಾಲಲ್ಲಿ ನಡೆಯುವಂತೆ ಮಾಡಿದೆ. ಅಧಿಕಾರಕ್ಕೆ ಬಂದ ಉತ್ಸಾಹದಲ್ಲಿ ಆರ್ಥಿಕ ಇಲಾಖೆಯ ಸ್ಥಿತಿಗತಿ ನೋಡದೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುತ್ತೇನೆಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಈಗ ಅದನ್ನು ಮರೆತು ಖಾತೆ ಹಂಚಿಕೆ ಗಲಾಟೆಯಲ್ಲಿ ನಿರತರಾಗಿದ್ದಾರೆ. ರಿಯಾಯಿತಿ ಬಸ್‌ ಪಾಸ್‌ ವಿತರಣೆ ಸ್ಥಗಿತಗೊಂಡಿರುವುದರಿಂದ ಶಾಲಾ ಮಕ್ಕಳು ಟಿಕೆಟ್‌ಗೆ ಪೂರ್ತಿ ಹಣ ಕೊಟ್ಟು ಪ್ರಯಾಣಿಸುತ್ತಿದ್ದಾರೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಸಕಾಲಕ್ಕೆ ಶೂ, ಸಾಕ್ಸ್‌ ಪೂರೈಸದಿರುವುದರಿಂದ ಬಡ ಮಕ್ಕಳು ಬರಿಗಾಲಲ್ಲೇ ಶಾಲೆಗೆ ಹೋಗುವ ಸ್ಥಿತಿ ಬಂದಿದೆ. ಒಂದು ಕಡೆ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ, ಮತ್ತೊಂದು ಕಡೆ ಸರ್ಕಾರಿ ಶಾಲೆಗಳ ಪ್ರವೇಶಾತಿ ಇಳಿಕೆಯಾಗಿದೆ. ಇವೆಲ್ಲವನ್ನೂ ನೋಡಲು ಶಿಕ್ಷಣ ಇಲಾಖೆಗೆ ಸಚಿವರ ದಿಕ್ಕಿಲ್ಲ. ಇಂತಹ ಸನ್ನಿವೇಶದಲ್ಲೂ ಶೂ ಸಾಕ್ಸ್‌ ಪೂರೈಸದೇ ಇದ್ದಲ್ಲಿ ಸರ್ಕಾರಿ ಶಾಲೆಗಳ ಮೇಲೆ ಜನರಿಗಿರುವ ಸ್ವಲ್ಪ ವಿಶ್ವಾಸವೂ ಬತ್ತಿಹೋಗುತ್ತದೆ. ನಿಮ್ಮ ಅಧಿಕಾರದ ಮಕ್ಕಳಾಟಿಕೆಯನ್ನು ಬೇಗ ಮುಗಿಸಿ ಮಕ್ಕಳಿಗೆ ಶೂ, ಸಾಕ್ಸ್‌ ಪೂರೈಸಿ.

About The Author