Hubli News: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಭರ್ಜರಿ ದಾಳಿ ನಡೆಸಿದ್ದಾರೆ. ಈ ಪೈಕಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ಅವರಿಗೆ ಸೇರಿದ ಹುಬ್ಬಳ್ಳಿ ಕಚೇರಿ ಹಾಗೂ ದಾವಣಗೆರೆಯ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಾಗೂ ಸಾರ್ವಜನಿಕರ ಹಣ ದುರುಪಯೋಗದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ಅವರಿಗೆ ಸೇರಿದ ಹುಬ್ಬಳ್ಳಿಯ ಕಚೇರಿ ಹಾಗೂ ದಾವಣಗೆರೆಯ ನಿವಾಸದ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರ ಅವರ ನೇತೃತ್ವದಲ್ಲಿ 12ಕ್ಕೂ ಹೆಚ್ಚು ತಂಡಗಳು ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಯ ಮನೆ ಹಾಗೂ ಕಚೇರಿಯಲ್ಲಿರುವ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ನಗದು, ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದೇ ಕಾರ್ಯಾಚರಣೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಹಾಗೂ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಕೆಂಚಪ್ಪ ಅವರಿಗೆ ಸೇರಿದ ನಿವಾಸಗಳು ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಕಾರ್ಯಾಚರಣೆ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ನಡೆದ ಈ ದಾಳಿ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ಆತಂಕ ಸೃಷ್ಟಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.




