Hubli News: ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಇಂದು ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕನ್ನಡ ಶಾಲೆಯ ಮೇಲ್ಛಾವಣಿಯ ತಗಡುಗಳು ಕಿತ್ತು ಬಿದ್ದಿವೆ. ಅದೃಷ್ಟವಶಾತ್ ಘಟನೆ ವೇಳೆ ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಇಂದು ಏಕಾಏಕಿ ಸುರಿದ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ಗಳು ಹಾರಿ ಬಿದ್ದಿವೆ. ಮಳೆಯಿಗಿಂತಲೂ ಹೆಚ್ಚು ವೇಗದಲ್ಲಿ ಬೀಸಿದ ಗಾಳಿಯಿಂದ ಶಾಲೆಯ ಕಟ್ಟಡಕ್ಕೆ ಹಾನಿಯಾಗಿದ್ದು, ಕೆಲ ತಗಡುಗಳು ಕಿತ್ತು ಬಿದ್ದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇದೇ ವೇಳೆ ಗ್ರಾಮದ ಹಲವು ಮನೆಗಳಿಗೂ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಸಂಭವಿಸಿದ ವೇಳೆ ಶಾಲಾ ಮಕ್ಕಳು ಮನೆಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಒಂದು ವೇಳೆ ಶಾಲಾ ಅವಧಿಯಲ್ಲಿ ಈ ಘಟನೆ ನಡೆದಿದ್ದರೆ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯ ಕಟ್ಟಡದ ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರೆಡ್ಡಿ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಹಾನಿಗೊಳಗಾದ ಶಾಲೆಯ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಂಡು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.




