Political News: ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್‌ಎಸ್ ನೋಂದಣಿ ಬಗ್ಗೆ ಪ್ರಶ್ನಿಸಿ, ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದರು.
ಆದರೆ ಅದಕ್ಕೂ ಮುನ್ನವೇ ಮೋಹನ್ ಭಾಗವತ್ ಅವರು ಹಿಂದೂ ಧರ್ಮವೂ ನೋಂದಣಿಯಾಗಿಲ್ಲವೆಂದು ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮೋಹನ್ ಭಾಗವತ್ ಅವರು, ಹಿಂದೂ ಧರ್ಮ ಮತ್ತು ಆರ್‌ಎಸ್‌ಎಸ್ ಹೋಲಿಕೆ ಮಾಡಿ ಮಾತನಾಡಿದ್ದಾರೆಂದು ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಕಿಡಿಕಾಾರಿದ್ದರು.
ಇದರ“ಂದಿಗೆ ಬಿಜೆಪಿ ನಾಯಕರು ಕೂಡ ಆರ್ಎಸ್ಎಸ್ ಬಗ್ಗೆ ಮಾತನಾಡಿರು, ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್, ಕೊಟ್ಟ ಕುದುರೆಯ ಏರಲರಿಯದ ವೀರ ಪ್ರಿಯಾಂಕ್ ಖರ್ಗೆಯವರೇ, ನಿಮ್ಮನ್ನು ಆವರಿಸಿದ RSS ಪೋಬಿಯಾ ಬಿಡುಗಡೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಪರಿಸ್ಥಿತಿ ಬದಲಾದಾಗ ಮನಃಸ್ಥಿತಿ ಬದಲಾಗುತ್ತದೆ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ ನಿಮ್ಮ ವಿಚಾರದಲ್ಲಿ ಆ ನಿರೀಕ್ಷೆ ಹುಸಿಯಾಗಿದೆ ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಮೂರು ವರ್ಷಗಳ ಕಾಲ ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಮೂರು ವರ್ಷದಲ್ಲಿ ಎಷ್ಟು ಕಿಮೀ ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದಿರಿ ಎಂಬ ಪ್ರಶ್ನೆ ರಾಜ್ಯದ ಜನರಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಶೇಷ ಉಪಯೋಜನೆ SCP-TSP ಹಣ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಾಗ ಉಸಿರೆತ್ತದ ನೀವು ನಿಮ್ಮ ವೈಫಲ್ಯವನ್ನು ಮುಚ್ಚುವುದಕ್ಕೆ RSS ವಿರುದ್ಧ ನಾಲಗೆ ಹರಿಬಿಡುತ್ತಲೇ ಬಂದಿರಿ.ಕಲಬುರ್ಗಿ ಜಿಲ್ಲೆಯ ತಲಾದಾಯ ಕ್ಷೀಣಿಸಿದ ಬಗ್ಗೆ,ಕಳಪೆ ಪರೀಕ್ಷಾ ಫಲಿತಾಂಶದ ಬಗ್ಗೆ ನೀವು ಮಾತನಾಡಲೇ ಇಲ್ಲ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಆದರೆ ನೀವು RSS ವಿಚಾರದಲ್ಲಿ ಮಾತ್ರ ” ಮಾತನಾಡುವವನೇ ಮಹಾಶೂರ” ಎಂಬಂತೆ ವರ್ತಿಸುತ್ತಿದ್ದೀರಿ. ನೀವೀಗ ರಾಜ್ಯದ ಗೃಹ ಸಚಿವರಾಗಿದ್ದೀರಿ. ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸುವುದಕ್ಕೆ ನಿಮ್ಮ ಮುಂದೆ ಹಲವು ಸವಾಲುಗಳಿವೆ. ಭ್ರಷ್ಟತನದಲ್ಲಿ ಮುಳುಗಿ ಹೋಗಿರುವ ಪೊಲೀಸ್ ಇಲಾಖೆಯನ್ನು ತಹಬದಿಗೆ ತರುವ ಆದ್ಯ ಕರ್ತವ್ಯ ನಿಮ್ಮ ಮೇಲಿದೆ.
ಅನ್ಯರಾಜ್ಯಗಳಲ್ಲಿ ಕರ್ನಾಟಕ ಪೊಲೀಸ್ ಮಾನ ಹರಾಜಾಗುತ್ತಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು ಖಾಕಿ ಕರ್ತವ್ಯ ಮರೆತಿದೆ. ಇದೆಲ್ಲದರ ಬಗ್ಗೆ ಉತ್ತರಿಸಬೇಕಾದ ನೀವು ಆರ್ ಎಸ್ ಎಸ್ ಬಗ್ಗೆ ಕಂಠ ಶೋಷಣೆ ಮಾಡಿಕೊಳ್ಳುವ ಪ್ರಯತ್ನವನ್ನು ಇನ್ನಾದರೂ ನಿಲ್ಲಿಸಿ ಎಂದು ಸುನೀಲ್ ಕುಮಾರ್ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.




