Political News: ಆರ್ಎಸ್ಎಸ್ ನೋಂದಣಿ ಬಗ್ಗೆ ಪ್ರಶ್ನಿಸಿ ಮೋಹನ್ ಭಾಗವತರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಿ.ಟಿ.ರವಿಯವರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಪ್ರಿಯಾಂಕ್ ಖರ್ಗೆ ಅವರಿಗೆ 1 ಬರಿ ಶಾಖೆಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ರವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಲು ಪತ್ರ ಬರೆಯುವುದಕ್ಕಿಂತ ಶಾಖೆಗೆ ಭೇಟಿ ನೀಡುವುದು ಉತ್ತಮ ಮಾರ್ಗ. ಆರ್ಎಸ್ಎಸ್ ಯಾವುದೇ ಸೊಸೈಟಿ, ಟ್ರಸ್ಟ್, ಕಂಪನಿ ಅಥವಾ ರಾಜಕೀಯ ಪಕ್ಷವಲ್ಲ. ಅದು ವ್ಯಕ್ತಿಯಲ್ಲಿ ದೇಶಭಕ್ತಿ, ಸಂಸ್ಕಾರ ಹಾಗೂ ಸಮಾಜಮುಖಿ ಮನೋಭಾವ ಬೆಳೆಸುವ ಅನೌಪಚಾರಿಕ ಶಿಕ್ಷಣದ ಸಂಘಟನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಕಬಡ್ಡಿ ಆಟ, ಹಾಡು, ಕಥೆ, ವಚನ ಹಾಗೂ ಶ್ಲೋಕಗಳ ಮೂಲಕ ವ್ಯಕ್ತಿತ್ವ ವಿಕಸನ ಮಾಡುವ ಕಾರ್ಯವನ್ನು ಸಂಘ ಮಾಡುತ್ತದೆ. ಇಂತಹ ಅನೌಪಚಾರಿಕ ಶಿಕ್ಷಣಕ್ಕೆ ಪ್ರತ್ಯೇಕ ನೋಂದಣಿ ಕಡ್ಡಾಯವಲ್ಲ. ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಸಂಘದ ಕುರಿತು ಪ್ರಶ್ನೆ ಕೇಳಿದ್ದರೆ, ಅವರ ಇಲಾಖೆಯಲ್ಲೇ ಸಂಘದ ಕುರಿತ ನ್ಯಾಯಾಲಯದ ತೀರ್ಪುಗಳು, ನಿಷೇಧ ಹಿಂಪಡೆಯಲಾದ ಸಂದರ್ಭಗಳ ದಾಖಲೆಗಳು ಲಭ್ಯವಿವೆ ಎಂದು ರವಿ ಹೇಳಿದ್ದಾರೆ.
ಕುತೂಹಲದಿಂದ ತಿಳಿದುಕೊಳ್ಳುವ ಉದ್ದೇಶವಿದ್ದರೆ, ಶಾಖೆಗೆ ಬಂದು ಅನುಭವದ ಮೂಲಕ ಸಂಘವನ್ನು ಅರಿತುಕೊಳ್ಳಬಹುದು. ಸಂಘದ ಶಾಖೆಗೆ ಬರುವವರಿಗೆ ಜಾತಿ, ಧರ್ಮ, ಭಾಷೆ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಯಾವುದೇ ನಿರ್ಬಂಧವಿಲ್ಲ.
ಶಾಖೆಯಲ್ಲಿ ಭಾಗವಹಿಸಿ ಅನುಭವಿಸುವುದರಿಂದ ಸಂಘದ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರೂ ಸಂಘದ ಶಿಬಿರಗಳಿಗೆ ಭೇಟಿ ನೀಡಿ ಅನುಭವದ ಆಧಾರದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಿಯಾಂಕ್ ಖರ್ಗೆಯವರೂ ಶಾಖೆಗೆ ಭೇಟಿ ನೀಡಿ ಸಂಘವನ್ನು ಅರ್ಥಮಾಡಿಕೊಳ್ಳಲಿ ಎಂದು ರವಿ ಸಲಹೆ ನೀಡಿದ್ದಾರೆ.




