Political News: ವಿಧಾನಸಭೆಯಿಂದ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಇಂದು ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಅವರು, ಗೆದ್ದ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಮಳವಳ್ಳಿ ಶಿವಣ್ಣ, ಪಿ.ವಿ. ಮೋಹನ್, ವಿನಯ್ ಕಾರ್ತಿಕ್ ಹಾಗೂ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಮಾತನಾಡಿರುವ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ. ನಾವು ಯಾವ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದ್ದೇವೆಯೋ ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರೂ ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ನಮಗೆ ಹೆಚ್ಚಿನ ಮತ ನೀಡಿದ ಬೇರೆ ಬೇರೆ ಪಕ್ಷದ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನೀವು ನಮಗೆ ನೀಡಿದ ವಿಶ್ವಾಸ ಜನರಿಗೆ ನೀಡಿದ ಶಕ್ತಿ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಇದಕ್ಕೆ ದುಡಿದಂತಹ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಾಗೂ ಇತರೇ ಕಾರ್ಯದರ್ಶಿಗಳನ್ನು ನಾನು ಅಭಿನಂದಿಸುತ್ತೇನೆ.
ನಮ್ಮ ಪಕ್ಷದಿಂದ ಐದು ಅಭ್ಯರ್ಥಿಗಳು ನಿಂತಿದ್ದರು. ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದು ಜನ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು – ಅವರು ಗೆದ್ದಿದ್ದಾರೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ.




