ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ: ಕಾಂಗ್ರೆಸ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆರೋಪ

Political News: ಸುರಂಗ ರಸ್ತೆಯ ನೆಪ ಹೇಳಿ ಕಾಂಗ್ರೆಸ್ ಸರ್ಕಾರ ‘ವೆಟರಿನರಿ ಕಾಲೇಜ್’ ನಿಲ್ದಾಣವನ್ನು ಕೈಬಿಟ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ತೇಜಸ್ವಿ ಸೂರ್ಯ, ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕಂಟ್ರಾಕ್ಟರ್-ಕೇಂದ್ರಿತ, ಕಾರುಗಳಿಗೆ ಮಾತ್ರ ಆದ್ಯತೆ ನೀಡುವ ನಗರಾಭಿವೃದ್ಧಿ ನೀತಿಯಿಂದಾಗಿ ನಮ್ಮ ಬೆಂಗಳೂರು ಇಂದು ನರಳುತ್ತಿದೆ. BMRCL ಸಂಸ್ಥೆಯು ಕಡಿಮೆ ಪ್ರಯಾಣಿಕರ ನೆಪ ಒಡ್ಡಿ ನಮ್ಮ ಮೆಟ್ರೋ ಹಂತ 3A ನಲ್ಲಿನ ‘ವೆಟರಿನರಿ ಕಾಲೇಜ್’ ನಿಲ್ದಾಣವನ್ನು ಕೈಬಿಟ್ಟಿದೆ. ಆದರೆ ಅವರದೇ ಆದ ವರದಿ (DPR) ಬೇರೆಯದೇ ಕಥೆ ಹೇಳುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಕೇವಲ ಸುರಂಗ ರಸ್ತೆ ಯೋಜನೆಗೆ ಜಾಗ ಮಾಡಿಕೊಡಲು ಈ ಮೆಟ್ರೋ ನಿಲ್ದಾಣವನ್ನು ರದ್ದುಗೊಳಿಸಲಾಗಿದೆ. ವರದಿಯ ಪ್ರಕಾರ, 2031ರ ವೇಳೆಗೆ ಈ ವೆಟರಿನರಿ ಕಾಲೇಜ್ ನಿಲ್ದಾಣದಿಂದ ದಿನಕ್ಕೆ 18,303 ಜನರು ಪ್ರಯಾಣಿಸಲಿದ್ದಾರೆ. ಇದು ಈ ಮಾರ್ಗದ ಆರಂಭಿಕ ನಿಲ್ದಾಣವಾದ ಸರ್ಜಾಪುರ ಸೇರಿದಂತೆ ಇತರೆ ಹಲವು ನಿಲ್ದಾಣಗಳಿಗಿಂತ ಹೆಚ್ಚು! ಮೊದಲು ಸುರಂಗ ನಿಲ್ದಾಣ ಎಂದು ತಿಳಿಸಿ, ಆಮೇಲೆ ಮೇಲ್ಸೇತುವೆ ನಿಲ್ದಾಣ ಮಾಡಿ, ಈಗ ಕೊನೆಗೆ ಸುರಂಗ ರಸ್ತೆಗಾಗಿ ಇದನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

2033ರ ವೇಳೆಗೆ ಈ ಮಾರ್ಗದಲ್ಲಿ ದಿನಕ್ಕೆ 8 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುವ ನಿರೀಕ್ಷೆಯಿದೆ. ಆದರೆ, ಕಾರುಗಳಿಗಾಗಿ ಮಾಡುವ ಸುರಂಗ ರಸ್ತೆಯಲ್ಲಿ ಕೇವಲ 6,500 ವಾಹನಗಳು ಮಾತ್ರ ಹೋಗಲು ಸಾಧ್ಯ. ಸುರಂಗ ರಸ್ತೆಯ ಗೊಂದಲದಿಂದಾಗಿ ಈಗಾಗಲೇ ಎರಡು ವರ್ಷ ತಡವಾಗಿದ್ದು, ಯೋಜನೆಯ ವೆಚ್ಚ ದುಬಾರಿಯಾಗಿದೆ. ಈ ತಪ್ಪುಗಳನ್ನು ಮುಚ್ಚಿಹಾಕಲು ಈಗ BMRCL ನಿಲ್ದಾಣವನ್ನೇ ರದ್ದು ಮಾಡುತ್ತಿರುವುದು ವಿಚಿತ್ರವಾಗಿದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಜನರಿಗೆ ಅನುಕೂಲವಾಗುವ ಮೆಟ್ರೋ ನಿಲ್ದಾಣವನ್ನು ಕೈಬಿಟ್ಟು, ಕೇವಲ ಕಾರುಗಳಿಗಾಗಿ ಸುರಂಗ ರಸ್ತೆ ಮಾಡುತ್ತಿರುವುದು ಸರಿಯಾದ ನಿರ್ಧಾರವೇ ? ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಿಸಬೇಕಾದರೆ BMLTA ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಬೇಕು. ಬೆಂಗಳೂರಿಗೆ ಉತ್ತಮ ಸೌಲಭ್ಯ ಸಿಗಬೇಕು.

ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ನಾಗರಿಕರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

About The Author