Political News: ಕಸ ಸಂಗ್ರಹಣೆ ನೆಪದಲ್ಲಿ ಸರ್ಕಾರ ದುಡ್ಡು ಮಾಡಲು ಶುರು ಮಾಡಿದೆ. ಮಾರ್ಷಲ್‌ಗಳು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆಂದು ಆರ್.ಅಶೋಕ್ ಆರೋಪಿಸಿದ್ದಾರೆ.
ಬ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಮತ್ತೆ ವ್ಯಂಗ್ಯವಾಡಿರುವ ಆರ್.ಅಶೋಕ್, ಬ್ರಾಂಡ್ ಬೆಂಗಳೂರು ಅಲ್ಲ, ಇದು ‘ಸ್ಕ್ಯಾಮ್ ಬೆಂಗಳೂರು’! ಲೂಟಿಯಲ್ಲೂ ಆವಿಷ್ಕಾರ ಇದು ಕಾಂಗ್ರೆಸ್ ಸರ್ಕಾರದ Innovative Loot! ನಮ್ಮ ಸಿಲಿಕಾನ್ ಸಿಟಿಯಲ್ಲಿ ಕೊನೆಗೆ ಕಸದ ಆಟೋಗಳ ಲೆಕ್ಕಾಚಾರದಲ್ಲೂ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿರುವ ಮಹಾ ಹಗರಣ ಬಯಲಾಗಿದೆ! ಬಿಬಿಎಂಪಿ (BBMP) ಉತ್ತರ ವಲಯದ ಕಸ ಸಂಗ್ರಹಣೆಯಲ್ಲಿ ನಡೆದಿರುವ ಈ ತಂತ್ರಜ್ಞಾನ ಆಧಾರಿತ ದರೋಡೆ ಕಾಂಗ್ರೆಸ್ ಸರ್ಕಾರದ ಆಡಳಿತ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಆಟೋಗಳೇ ಇಲ್ಲದಿದ್ದರೂ, ಮೊಬೈಲ್ ಆಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆಟೋಗಳು ಕಸ ಸಂಗ್ರಹಣೆಗೆ ತೆರಳಿವೆ ಎಂದು ನಕಲಿ ಹಾಜರಾತಿ ದಾಖಲಿಸಿ, ಸಾರ್ವಜನಿಕರ ತೆರಿಗೆ ಹಣವನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಆಯುಕ್ತರು ಖುದ್ದಾಗಿ ದಿಢೀರ್ ಭೇಟಿ ನೀಡಿದಾಗ ಒಟ್ಟು ಇರಬೇಕಾಗಿದ್ದ ಆಟೋಗಳಲ್ಲಿ ಶೇಕಡಾ 50 ರಷ್ಟು ವಾಹನಗಳು ನಾಪತ್ತೆಯಾಗಿವೆ ಎಂದು ಆರೋಪಿಸಿರುವ ಆರ್.ಅಶೋಕ್ ಸಿಎಂ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಆ ಪ್ರಶ್ನೆಗಳು ಇಂತಿದೆ..
ಸ್ಥಳದಲ್ಲಿ ಇಲ್ಲದ ವಾಹನಗಳಿಗೂ ಆನ್‌ಲೈನ್‌ನಲ್ಲಿ ಹಾಜರಾತಿ ತೋರಿಸಿ ಬಿಲ್ ಎತ್ತುತ್ತಿರುವ ಈ ಕಳ್ಳಾಟದ ಹಿಂದೆ ಯಾರ ಕೈವಾಡವಿದೆ?
ಆಟೋಗಳೇ ಇಲ್ಲದೆ ಸುಳ್ಳು ಲೆಕ್ಕ ತೋರಿಸಿ ಹಣ ಲೂಟಿ ಮಾಡಿದ್ದು ಯಾರಿಗೆ ತಲುಪುತ್ತಿದೆ?
ಕಸ ಸಂಗ್ರಹಣೆ ಮಾಡದೆ ಇಡೀ ಬೆಂಗಳೂರನ್ನು ಕಸದ ತೊಟ್ಟಿ ಮಾಡುತ್ತಿರುವವರ ವಿರುದ್ಧ ಕೇವಲ ಮಾರ್ಷಲ್‌ಗಳ ಅಮಾನತು ನಾಟಕವೇಕೆ?
ಇದರ ಹಿಂದಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಅಸಲಿ ಮುಖವಾಡ ಕಳಚುವುದು ಯಾವಾಗ?
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರೇ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆಡಳಿತ ನಡೆಸುತ್ತಿದ್ದೀರಾ ಅಥವಾ ಕಣ್ಣು ಮುಚ್ಚಿ ಲೂಟಿಗೆ ಲೈಸೆನ್ಸ್ ನೀಡಿದ್ದೀರಾ?
ಕೇವಲ ಇಬ್ಬರು ಮಾರ್ಷಲ್‌ಗಳನ್ನು ವಜಾ ಮಾಡಿ ಕಣ್ಣೊರೆಸುವ ತಂತ್ರ ಬಿಡಿ. ನಿಮ್ಮ ಸರ್ಕಾರದ ಮೂಗಿನ ನೇರಕ್ಕೆ ತಂತ್ರಜ್ಞಾನವನ್ನೇ ದುರುಪಯೋಗಪಡಿಸಿಕೊಂಡು ಕಸದಲ್ಲೂ ರಸ ಹಿಂಡುತ್ತಿರುವ ಈ ‘ಗಾರ್ಬೇಜ್ ಮಾಫಿಯಾ’ ಹಗರಣದ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್‌ಗಳನ್ನು ಕಂಬಿ ಹಿಂದೆ ತಳ್ಳದಿದ್ದರೆ, ಈ ಭ್ರಷ್ಟ ಸರ್ಕಾರದ ವಿರುದ್ಧ ಬೆಂಗಳೂರಿನ ಜನರೇ ಬೀದಿಗಿಳಿಯಲಿದ್ದಾರೆ, ಎಚ್ಚರಿಕೆ! ಎಂದು ಆರ್.ಅಶೋಕ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.




