Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆ, ರೆಸಾರ್ಟ್ ರಾಜಕೀಯದ ಬಗ್ಗೆ ಚರ್ಚೆ ಜೋರಾಗಿದೆ. ಈ ಕಾರಣಕ್ಕೆ ವಿರೋಧ ಪಕ್ಷದರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆಯೂ ಗಮನ ನೀಡಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕುದುರೆ ವ್ಯಾಪಾರ, ಕುರ್ಚಿ ಕಿತ್ತಾಟ, ರೆಸಾರ್ಟ್ ರಾಜಕಾರಣ ಮತ್ತು ದೆಹಲಿ ದರ್ಬಾರ್‌ಗಳಲ್ಲೇ ಕಾಲ ಕಳೆಯುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಒಮ್ಮೆ ವಿಧಾನಸೌಧದಿಂದ ಹೊರಗೆ ಬಂದು ರೈತರ ಹೊಲಗಳತ್ತ ಕಣ್ಣಾಡಿಸಿ! ರಾಜ್ಯದ ಅನ್ನದಾತ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿದ್ದರೆ, ನಿಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ ಅಧಿಕಾರ ಹಂಚಿಕೆಯ ಲೆಕ್ಕಾಚಾರದಲ್ಲೇ ಮುಳುಗಿದೆ ಎಂದು ಆರ್.ಅಶೋಕ್ ಕಿಡಿಕಾರಿದ್ದು, ಸಿಎಂ ಅವರಿಗೆ ಕೆಲ ವಿಷಯಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆ ವಿಷಯಗಳು ಇಂತಿದೆ..
30 ವರ್ಷಗಳ ಬಳಿಕ ಭದ್ರಾ ಒಡಲು ಬರಿದು!
ಬಯಲುಸೀಮೆಯ ಜೀವನಾಡಿಯಾಗಿರುವ ಭದ್ರಾ ನದಿ ಇಂದು ಮರಳುಗಾಡಿನಂತಾಗಿದೆ. ಮೂರು ದಶಕಗಳ ಬಳಿಕ ನದಿಯ ಒಡಲು ಸಂಪೂರ್ಣ ಒಣಗಿ ಹೋಗಿದ್ದು, ನದಿಯ ಮಧ್ಯದಲ್ಲೇ ಯುವಕರು ವಾಲಿಬಾಲ್ ಆಡುವ ಸ್ಥಿತಿ ನಿರ್ಮಾಣವಾಗಿದೆ! ಇದು ಕೇವಲ ನದಿಯ ದುಸ್ಥಿತಿ ಅಲ್ಲ… ಇದು ಕಾಂಗ್ರೆಸ್ ಸರ್ಕಾರದ ಆದ್ಯತೆಗಳ ದಿವಾಳಿತನದ ಸಂಕೇತ!
ಕಲಬುರಗಿಯಲ್ಲಿ ಬರ ಘೋಷಣೆಗೆ ರೈತರ ಆಗ್ರಹ!
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಬೀದಿಗಿಳಿದು ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ. ರೈತರು ಹೋರಾಟ ಮಾಡುತ್ತಿದ್ದಾರೆ… ಆದರೆ ನಿಮ್ಮ ಕಲಬುರಗಿಯ ಸಚಿವರು ಮಾತ್ರ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಸುದ್ದಿಯಲ್ಲಿರುವ ತಂತ್ರಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಹಾವೇರಿಯಲ್ಲಿ ಶೇ.57 ರಷ್ಟು ಮಳೆ ಕೊರತೆ!
ಮೊಳಕೆಯೊಡೆದ ಬೆಳೆಗಳು ಹೊಲದಲ್ಲೇ ಒಣಗುತ್ತಿವೆ. ರೈತರ ಕನಸುಗಳು ಮಣ್ಣಾಗುತ್ತಿವೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತ ತನ್ನ ಬೆಳೆ ಉಳಿಸಿಕೊಳ್ಳಲಾಗದೆ ಕಂಗಾಲಾಗಿದ್ದಾನೆ. ಆದರೆ ಸರ್ಕಾರಕ್ಕೆ ಈ ಸಂಕಷ್ಟ ಕಾಣುತ್ತಿಲ್ಲ!
ಕೊಡಗಿನಲ್ಲಿ ದೇವರಿಗೆ ಮೊರೆ, ಗದಗದಲ್ಲಿ ಗುರ್ಜಿ ಪೂಜೆ!
ಕಾವೇರಿಯ ತವರು ಕೊಡಗಿನಲ್ಲೇ ಮಳೆಗಾಗಿ ವಿಶೇಷ ಪೂಜೆ ನಡೆಯುತ್ತಿದೆ. ಗದಗದಲ್ಲಿ ರೈತ ಮಹಿಳೆಯರು ಗುರ್ಜಿ ಪೂಜೆ ಮಾಡಿ ಮಳೆಯ ಬೇಡಿಕೆ ಇಡುತ್ತಿದ್ದಾರೆ. ಒಂದು ಕಡೆ ರೈತರು ದೇವರ ಮೊರೆ ಹೋಗುತ್ತಿದ್ದಾರೆ… ಮತ್ತೊಂದು ಕಡೆ ಸರ್ಕಾರ ಅಧಿಕಾರದ ಮೊರೆ ಹೋಗುತ್ತಿದೆ!
ರಾಜ್ಯಕ್ಕೆ ಕೃಷಿ ಸಚಿವರೇ ಇಲ್ಲ!
ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಳು ಒಣಗುತ್ತಿವೆ. ಜಲಾಶಯಗಳು ಬರಿದಾಗುತ್ತಿವೆ. ಬರಗಾಲದ ಭೀತಿ ರಾಜ್ಯವನ್ನು ಆವರಿಸುತ್ತಿದೆ. ಆದರೆ ಕಳೆದ ಒಂದು ತಿಂಗಳಿಂದ ರಾಜ್ಯಕ್ಕೆ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ! ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನು ಬೇಕು? ರೈತರ ಕಣ್ಣೀರು ಒರೆಸಲು ಸಮಯವಿಲ್ಲ, ಆದರೆ ಕುದುರೆ ವ್ಯಾಪಾರಕ್ಕೆ ಮಾತ್ರ ಸಮಯವಿದೆಯೇ?
ಮುಖ್ಯಮಂತ್ರಿಗಳೇ, ಹಾವೇರಿ, ಕಲಬುರಗಿ, ಗದಗ, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿ ರೈತರು ಆತಂಕದಲ್ಲಿದ್ದಾರೆ. ತಕ್ಷಣವೇ ಜಿಲ್ಲಾ ಪ್ರವಾಸ ಕೈಗೊಳ್ಳಿ. ಬರಗಾಲದ ಸ್ಥಿತಿಯನ್ನು ಪರಿಶೀಲಿಸಿ. ರೈತರಿಗೆ ಪರಿಹಾರ ಘೋಷಿಸಿ. ಅಥವಾ ಸ್ಪಷ್ಟವಾಗಿ ಹೇಳಿಬಿಡಿ – ನಿಮ್ಮ ಸರ್ಕಾರಕ್ಕೆ ರೈತರಿಗಿಂತ ಕುರ್ಚಿಯೇ ಮುಖ್ಯ ಎಂದು! ಅನ್ನ ನೀಡುವ ರೈತನ ಉದರ ಒಣಗುತ್ತಿರುವಾಗ, ಕಾಂಗ್ರೆಸ್ ಸರ್ಕಾರ ಮಾತ್ರ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ರೈತರ ಕಣ್ಣೀರಿನ ಬೆಲೆ ಅರಿಯದ ಈ ಸರ್ಕಾರಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಆರ್.ಅಶೋಕ್ ಎಂದಿನಂತೆ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




