ಗೃಹಲಕ್ಷ್ಮಿಯ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಬರಿದಾಗಿ, ಕಾಂಗ್ರೆಸಿಗರ ಖಜಾನೆ ತುಂಬಿದ್ದೇ ಒಂದು ಸಾಧನೆ!: ಸಿ.ಟಿ.ರವಿ

Political News: ಗೃಹಲಕ್ಷ್ಮೀ ಯೋಜನೆಯಲ್ಲಿ ಗೋಲ್‌ಮಾಲ್ ಆಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, 10 ಸಾವಿರಕ್ಕೂ ಹೆಚ್ಚು ಜನರ ಹಣ ಒಂದೇ ಖಾತೆಗೆ ಜಮಾ ಆಗುತ್ತಿತ್ತು ಎಂದು ಆರೋಪಿಸಲಾಾಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 19,020 ಫಲಾನುಭವಿಗಳ ಗೃಹಲಕ್ಷ್ಮಿ ಹಣ ಒಂದೇ ಖಾತೆಗೆ ಜಮಾ ಆಗುತ್ತಿತ್ತು ಎಂದರೆ, ಈ ಯೋಜನೆಯ ಹಿಂದೆ ಎಷ್ಟರಮಟ್ಟಿನ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಊಹಿಸಬಹುದು. ಇದು ಯೋಜಿತ ಲೂಟಿಯಲ್ಲದೆ ಇನ್ನೇನು? ಬ್ಯಾಂಕ್ ಖಾತೆಯ ವಿವರವೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂಪಾಯಿ ಪಾವತಿಸಲಾಗಿದೆ. ಈ ಹಣ ಯಾರ ಪಾಲಾಯಿತು? ಈ ಖಾತೆಗಳು ಯಾರದ್ದು? ಎಂದು ರವಿ ಪ್ರಶ್ನಿಸಿದ್ದಾರೆ.

ಇನ್ನು ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಾಕಿಯ ಕುರಿತು ಬೆಳಗಾವಿ ಅಧಿವೇಶನದಲ್ಲೇ ಪ್ರಶ್ನೆ ಮಾಡಲಾಗಿದ್ದರೂ, ಅದಕ್ಕೆ ಕಾಂಗ್ರೆಸ್ ಸರ್ಕಾರ ಇನ್ನೂ ಉತ್ತರಿಸಿಲ್ಲ. ಆ 5,000 ಕೋಟಿ ರೂಪಾಯಿ ಎಲ್ಲಿಗೆ ಹೋಗಿದೆ? ಒಂದು ವೇಳೆ ಕಾಂಗ್ರೆಸ್ ಸರ್ಕಾರ ತಾನು ಹೇಳಿದಂತೆ ಪ್ರಾಮಾಣಿಕವಾಗಿದ್ದರೆ, ತಕ್ಷಣವೇ ಸಿಎಜಿಗೆ ದಾಖಲೆಗಳನ್ನು ಒದಗಿಸಬೇಕು. ಇಲ್ಲವಾದರೆ, ಇದೊಂದು ಲೂಟಿ ಸರ್ಕಾರ ಎನ್ನುವುದು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗುತ್ತದೆ ಎಂದು ರವಿ ಹೇಳಿದ್ದಾರೆ.

About The Author