ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದವರು, ರಾಮ‌ಮಂದಿರ ಅವ್ಯವಹಾರದ ಬಗ್ಗೆ ಮಾತನಾಡೋದು ಹಾಸ್ಯಸ್ಪದ- ಜೋಶಿ…!

Hubli News: ಹುಬ್ಬಳ್ಳಿ: ರಾಮನ ಅಸ್ತಿತ್ವ ಬಗ್ಗೆ ಪ್ರಶ್ನೆ ಮಾಡಿದವರು, ರಾಮ‌ ಕಾಲ್ಪನಿಕ ವ್ಯಕ್ತಿ ಎಂದವರು, ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದರವರು ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಮಹಮ್ಮದ್ ಘಜನಿ ಹಾಗೂ ಬಾಬರ್ ಅನ್ನು ಪೂಜೆ ಮಾಡಿದವರು ರಾಮನ ಮಂದಿರದ ಬಗ್ಗೆ ಏನು ಮಾತನಾಡುತ್ತಿದ್ದಾರೆ? ಕಾಂಗ್ರೆಸ್ ನಾಯಕರು ಘಜನಿ ಹಾಗೂ ಬಾಬರ್ ಅವರನ್ನು ಹೊಗಳಿದ್ದರು. ಕಾಂಗ್ರೆಸ್ ತಮ್ಮ ಅಸ್ತಿತ್ವದ ಬಗ್ಗೆ ಯೋಚಿಸಬೇಕು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇರಳ ಬಿಟ್ಟರೆ ಉಳಿದ ಕಡೆ ಸೋಲು ಅನುಭವಿಸಿದ್ದಾರೆ’ ಎಂದು ಹರಿಹಾಯ್ದರು.

‘ಬಿ.ಕೆ. ಹರಿಪ್ರಸಾದ್ ಅವರು ಈ ಹಿಂದೆ ಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಡ್ಡಿ ಬಗ್ಗೆ ಮಾತನಾಡಿದ್ದರು. ಮೂರು ಅವಧಿಯ ಗಡಿ ದಾಟದ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ‌. ಈ ವಿಚಾರ ವಿಷಯಾಂತರ ಮಾಡಲು ಕಾಂಗ್ರೆಸ್ ನಾಯಕರು ಆರ್‌ಎಸ್ಎಸ್ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಸಂಘ ಪರಿವಾರದವರು ಈ ಬಗ್ಗೆ ಉತ್ತರಿಸಿದ್ದಾರೆ. ಹಿಂದೆ ನಾಲ್ಕೈದು ಬಾರಿ ನಿಷೇಧ ಮಾಡಿದಾಗ ನ್ಯಾಯಾಲಯವು ಛೀಮಾರಿ ಹಾಕಿದೆ. ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು ಕಾಂಗ್ರೆಸ್ಸಿಗರು ಸಂಘದ ಕುರಿತು ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಷ್ಟಾದರೂ ಎಸ್ಐಆರ್ ವಿರೋಧ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲೆಡೆ ಕಾಂಗ್ರೆಸ್ ಸೋಲು ಅನುಭವಿಸುತ್ತಿದ್ದು, ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕೇರಳ ಹಾಗೂ ಜಮ್ಮು ಕಾಶ್ಮೀರದಲ್ಲಿ ಎಸ್ಐಆರ್ ಅನ್ನು ಸ್ವಾಗತಿಸಲಾಗಿದೆ. ತಮಗೆ ಅನುಕೂಲವಾದಲ್ಲಿ ಸ್ವಾಗತ. ಆಗದ ಕಡೆ ವಿರೋಧ ಮಾಡುವುದೇ ಕಾಂಗ್ರೆಸ್ ಕೆಲಸ’ ಎಂದು ವ್ಯಂಗ್ಯವಾಡಿದರು.

‘ಶಾಸಕ ಸಂತೋಷ ಲಾಡ್ ಅವರಿಗೆ ಬಿಜೆಪಿ ನಾಯಕರನ್ನು ಟೀಕಿಸುವುದೇ ಕೆಲಸ. ಪ್ರಧಾನಿ ಮೋದಿ ಹಾಗೂ ನನ್ನನ್ನು ಟೀಕಿಸಿದರೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡುವ ಅವರು ಯಾವ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುವುದು ಇಡೀ ದೇಶಕ್ಕೆ ಗೊತ್ತಿದೆ. ದೇಶದಲ್ಲಿ ಅಭಿವೃದ್ಧಿ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಾಯಕರು ಹತಾಶೆ ಮನೋಭಾವದಿಂದ ಹೀಗೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದವರು, ಪ್ರಜಾಪ್ರಭುತ್ವ ಕತ್ತು ಹಿಸುಕಿದವರು ದೇಶದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದರು.

‘ಪೆಟ್ರೋಲ್- ಡೀಸೆಲ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಾಗಿದೆ. ದೇಶದಲ್ಲಿ ಕಡಿಮೆ ಮಾಡುವ ಬಗ್ಗೆ ಸಂಬಂಧಿಸಿದ ಇಲಾಖೆಯವರು ನಿರ್ಧರಿಸುತ್ತಾರೆ. ಇದು ಸುಧೀರ್ಘ ಪ್ರಕ್ರಿಯೆ ಆಗಿದೆ. ಬೆಲೆ ಕಡಿಮೆಯಾಗಲು ಸ್ವಲ್ಪ‌ ಸಮಯ ಆಗಲಿದೆ’ ಎಂದು ಹೇಳಿದರು.

‘ಬಿಆರ್‌ಟಿಎಸ್ ಸಾರಿಗೆ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡಿದರೆ ಅದು ಉತ್ತಮ‌ ಯೋಜನೆಯಾಗಿದೆ. ಟ್ರಾಫಿಕ್ ಸಮಸ್ಯೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರದ ನಿರ್ಧಾರ ಕೈಗೊಳ್ಳಬೇಕು. ಜನಪ್ರತಿನಿಧಿಗಳ ಸಭೆ ಕರೆದರೆ ಅಲ್ಲಿ ಈ ಯೋಜನೆ ಬಗ್ಗೆ ಸಲಹೆ ನೀಡಲಾಗುವುದು’ ಎಂದು ಹೇಳಿದರು.

 

About The Author