ಖರ್ಗೆ ಅವರಿಗೆ ಅವಮಾನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಬಳಿಕ ‘ಶುದ್ಧೀಕರಣ’ ನಡೆಸಲಾಗಿದೆ ಎಂಬ ಆರೋಪವನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹಿರಿಯ ರಾಜಕಾರಣಿಯಾಗಿದ್ದು, ದೀರ್ಘಕಾಲದ ಸಾರ್ವಜನಿಕ ಜೀವನದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅಂತಹ ಹಿರಿಯ ನಾಯಕರು ಹಾಗೂ ದಲಿತ ಸಮುದಾಯದ ನಾಯಕರಿಗೆ ಅವಮಾನ ಮಾಡುವ ರೀತಿಯ ಘಟನೆಗಳು ನಡೆದಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಮಲೀಲಾ ಮೈದಾನದಲ್ಲಿ ಖರ್ಗೆ ಅವರ ಭಾಷಣದ ನಂತರ ಶುದ್ಧೀಕರಣದ ಹೆಸರಿನಲ್ಲಿ ನಡೆದಿರುವ ಕೃತ್ಯವು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಇದು ದಲಿತ ಸಮುದಾಯಕ್ಕೆ, ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣರಾದವರನ್ನು ಬಂಧಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಗೌರವ ಮತ್ತು ಹಕ್ಕುಗಳನ್ನು ನೀಡುವುದು ಸಂವಿಧಾನದ ಆಶಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಯಾವುದೇ ರೀತಿಯ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ದೇಶದ ರಾಷ್ಟ್ರಪತಿಗಳು ಬುಡಕಟ್ಟು ಸಮುದಾಯದಿಂದ ಬಂದಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಉತ್ತರಾಖಂಡ ಸರ್ಕಾರವು ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಘಟನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ದೇಶದ ಆಡಳಿತದಲ್ಲಿ ಪಾಲಿಸಬೇಕು. ಯಾವುದೇ ವ್ಯಕ್ತಿಯ ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಅವಮಾನಿಸುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮುಖಂಡರಾದ ಮಲ್ಲೇಶ್, ಜಿ. ಪ್ರಕಾಶ್, ಹೇಮರಾಜ್, ಮುರುಳಿ, ಉಮೇಶ್, ಪುಟ್ಟರಾಜು, ಕುಶಾಲ್ ಹರುವೇಗೌಡ, ಲಕ್ಷ್ಮೀ ನಾರಾಯಣ, ಮಾಧವಹನೂರು, ನವೀನ್ ಸಾಯಿ, ಕಿಶೋರ್, ಯದುಕುಮಾರ್, ಮಂಜುನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾಕಾರರು ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಸಂವಿಧಾನ ವಿರೋಧಿ ಹಾಗೂ ಜಾತಿ ಆಧಾರಿತ ಅವಮಾನಕಾರಿ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

About The Author