Hubli: ಶಹರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಬೈಕ್ ಕಳ್ಳ ಅರೆಸ್ಟ್: ಬಂಧಿತನಿಂದ 5 ದ್ವಿಚಕ್ರ ವಾಹನ ವಶ

Hubli News: ಅವಳಿ ನಗರದಲ್ಲಿ ವಿವಿಧ ಕಡೆ ಬೈಕ್ ಕಳ್ಳತನ ಮಾಡಿ ಓಡಾಡುತ್ತಿದ್ದ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮರಗೋಳ ನಿವಾಸಿ ಬಾಬಾಜಾನ ಧಾರವಾಡ ಬಂಧಿತ ಆರೋಪಿ.

ಕಳೆದ ಜೂನ್ 24ರಂದು ನಗರದ ಹರ್ಷ ಕಾಂಪ್ಲೆಕ್ಸ್ ಸಮೀಪ ಬೈಕ್ ಕಳ್ಳತನವಾಗಿದ್ದ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಮುಸ್ತಾಕ್ ಅಹ್ಮದ್ ಅಲಿ ಶೇಕ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಆರೋಪಿ ಒಟ್ಟು ಐದು ಬೈಕ್‌ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಸುಮಾರು 3 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಾಹನಗಳಲ್ಲಿ ಒಂದು ಹೋಂಡಾ ಆಕ್ಟಿವಾ, ಒಂದು ಹೋಂಡಾ ಡಿಯೋ, ಒಂದು ಟಿವಿಎಸ್ ಎನ್‌ಟಾರ್ಕ್, ಒಂದು ಟಿವಿಎಸ್ ಜುಪಿಟರ್ ಹಾಗೂ ಒಂದು ಸುಜುಕಿ ಆಕ್ಸೆಸ್ ಸೇರಿವೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಶಹರ ಠಾಣೆ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

About The Author