ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Political News: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿದಿನ ತಮಿಳುನಾಡಿಗೆ ಕದ್ದು ಮುಚ್ಚಿ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ನಾಡದ್ರೋಹಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ! ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು? ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ! ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ! ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು ಮುಖ್ಯಮಂತ್ರಿಗಳೇ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಈ ನಾಡದ್ರೋಹಿ ಕಾಂಗ್ರೆಸ್ ಪಕ್ಷದ ಇತಿಹಾಸವೇ ಇಷ್ಟು: ಅಧಿಕಾರವಿಲ್ಲದಾಗ: “ನಮ್ಮ ನೀರು ನಮ್ಮ ಹಕ್ಕು” ಅಂತ ನಾಟಕದ ಬೊಬ್ಬೆ! ಅಧಿಕಾರ ಸಿಕ್ಕಾಗ: “ನಮ್ಮ ನೀರು ತಮಿಳುನಾಡಿನ ಹಕ್ಕು” ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು. ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು DMK, ಇಂದು TVK ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ? ಎಂದು ಸಿಎಂ ಡಿಕೆಶಿಗೆ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ? ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ? ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ, ನೀರಿನ ಹಕ್ಕು ನೀಡಲಾಗದ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

About The Author