Dharwad: ರೈತನ ಹೊಲದಲ್ಲಿ ಕುಳಿತು ಕಾರಹುಣ್ಣಿಮೆಯ ವಿಶೇಷ ಭೋಜನ ಸವಿದ ಕೇಂದ್ರ ಸಚಿವ ಶೇಖಾವತ್

Dharwad Political News: ಬೆಳಗಾವಿಯಿಂದ ವಾಪಸ್ ಬರುತ್ತಿದ್ದ ವೇಳೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಧಾರವಾಡ ತಾಲೂಕಿನ ತೇಗೂರು ಗ್ರಾಮದ ರೈತರೊಬ್ಬರ ಹೊಲಕ್ಕೆ ಭೇಟಿ ನೀಡಿ, ಕಾರ ಹುಣ್ಣಿಮೆಯ ವಿಶೇಷ ಭೋಜನ ಸವಿದು ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿಯಿಂದ ಪ್ರಯಾಣ ಬೆಳೆಸಿದ್ದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ಹಾದು ಹೋಗುತ್ತಿದ್ದ ವೇಳೆ ಹೊಲದಲ್ಲಿ ಊಟ ಮಾಡುತ್ತಿದ್ದ ಮಾಜಿ ಯೋಧ ಹಾಗೂ ರೈತ ರಮೇಶ್ ಗೋಕಾವಿ ಅವರನ್ನು ಗಮನಿಸಿದರು. ತಕ್ಷಣ ವಾಹನ ನಿಲ್ಲಿಸಿ ಹೊಲಕ್ಕೆ ತೆರಳಿ ಅವರೊಂದಿಗೆ ನೆಲದ ಮೇಲೆಯೇ ಕುಳಿತು ಕಾರ ಹುಣ್ಣಿಮೆಯ ವಿಶೇಷ ಭೋಜನ ಸವಿದರು.

ನಿವೃತ್ತಿಯ ನಂತರ ಕೃಷಿಯಲ್ಲಿ ತೊಡಗಿಕೊಂಡಿರುವ ಮಾಜಿ ಯೋಧ ರಮೇಶ್ ಗೋಕಾವಿ ಅವರೊಂದಿಗೆ ಸಚಿವರು ಕೆಲಕಾಲ ಮಾತುಕತೆ ನಡೆಸಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಮಾಜಿ ಯೋಧ ಎಂದು ತಿಳಿದ ಕೂಡಲೇ ಸಚಿವರು ಅವರನ್ನು ಅಭಿನಂದಿಸಿ ಗೌರವ ವ್ಯಕ್ತಪಡಿಸಿದರು.

ಸಾಮಾನ್ಯ ರೈತನ ಹೊಲಕ್ಕೆ ತೆರಳಿ ಯಾವುದೇ ಆಡಂಬರವಿಲ್ಲದೆ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಸಚಿವರ ನಡೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಪರೂಪದ ಕ್ಷಣಗಳ ಫೋಟೋಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವು ಇದೀಗ ವೈರಲ್ ಆಗುತ್ತಿವೆ.

ಕೇಂದ್ರ ಸಚಿವರ ಸರಳತೆ ಹಾಗೂ ಮಾಜಿ ಯೋಧನಿಗೆ ತೋರಿದ ಗೌರವ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಾರ ಹುಣ್ಣಿಮೆಯ ದಿನ ನಡೆದ ಈ ಭೇಟಿ ವಿಶೇಷ ಗಮನ ಸೆಳೆದಿದೆ.

About The Author