Gold Rate: ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ. ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 265 ರೂಪಾಯಿ ಕಡಿಮೆಯಾಗಿದೆ. ಬೆಳ್ಳಿ ದರವೂ ಇಳಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಖರೀದಿ ಆಸಕ್ತಿ ಹೆಚ್ಚುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮದಿಂದ ದೇಶದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನ ಕುಸಿದಿದೆ. ಸೋಮವಾರ 85 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ದರ, ಮಂಗಳವಾರ ಮತ್ತಷ್ಟು 265 ರೂಪಾಯಿ ಕಡಿಮೆಯಾಗಿದೆ.
ಇದರೊಂದಿಗೆ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,845 ರೂಪಾಯಿಗೆ ಇಳಿದಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 14,013 ರೂಪಾಯಿಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10,510 ರೂಪಾಯಿ ಇದೆ. ಇನ್ನು ಬೆಳ್ಳಿ ದರವೂ ಪ್ರತಿ ಗ್ರಾಂಗೆ 5 ರೂಪಾಯಿ ಇಳಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 235 ರೂಪಾಯಿ ದಾಖಲಾಗಿದೆ. ಚೆನ್ನೈ ಸೇರಿದಂತೆ ಕೆಲ ನಗರಗಳಲ್ಲಿ ಪ್ರತಿ ಗ್ರಾಂ ಬೆಳ್ಳಿ ಬೆಲೆ 245 ರೂಪಾಯಿ ಇದೆ.
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷ 28 ಸಾವಿರ 450 ರೂಪಾಯಿ ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷ 40 ಸಾವಿರ 130 ರೂಪಾಯಿಯಾಗಿದೆ. ಸತತ ಎರಡನೇ ದಿನ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿರುವುದು ಖರೀದಿದಾರರಿಗೆ ತುಸು ನಿರಾಳತೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗೆ ಅನುಗುಣವಾಗಿ ಬೆಲೆ ಏರಿಳಿತವಾಗುವ ಸಾಧ್ಯತೆ ಇದೆ.




