Rain alert: ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ರಾಜ್ಯದಲ್ಲಿ ಮಳೆ ಮಾತ್ರ ಕೈಕೊಟ್ಟಿದೆ. ಒಂದೇ ಒಂದು ಜಲಾಶಯವೂ ಭರ್ತಿಯಾಗಿಲ್ಲ. ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಇದರ ನಡುವೆ ಮುಂದಿನ ಐದು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ರೈತರಲ್ಲಿ ಮತ್ತೆ ಆಶಾಕಿರಣ ಮೂಡಿದೆ.
ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ಆತಂಕ ಮನೆ ಮಾಡಿದೆ. ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರೂ, ಕಳೆದ ಒಂದು ತಿಂಗಳಿಂದ ಮಳೆಯ ಕೊರತೆಯಿಂದ ಜಲಾಶಯಗಳು ತುಂಬಿಲ್ಲ. ಕೆರೆ-ಕಟ್ಟೆಗಳೂ ಖಾಲಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆ ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಿಗೆ ಮುಂದಿನ ಐದು ದಿನ ಮಳೆ ಮುನ್ಸೂಚನೆ ನೀಡಿದೆ. ಇಂದು 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜೂನ್ 30ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದೇ ರೈತರು ಬಿತ್ತನೆಗೆ ಕಾಯುತ್ತಿದ್ದಾರೆ. ಈಗಾಗಲೇ ಬಿತ್ತಿದ ಬೆಳೆಗಳು ಒಣಗಲಾರಂಭಿಸಿದ್ದು, ಮಳೆಗಾಗಿ ದೇವರ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲೂ ಮಳೆಗಾಗಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದು, ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ನೀರಿನ ಕೊರತೆ ಮತ್ತಷ್ಟು ತೀವ್ರಗೊಂಡಿದೆ. ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಬೆಳೆಗಳೂ ಒಣಗುತ್ತಿರುವುದರಿಂದ ರೈತರ ಆತಂಕ ಹೆಚ್ಚಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ನಿರೀಕ್ಷೆ ಮುಂದುವರಿದಿರುವ ನಡುವೆ, ಹವಾಮಾನ ಇಲಾಖೆಯ ಮುಂದಿನ ಐದು ದಿನಗಳ ಮಳೆ ಮುನ್ಸೂಚನೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ನಿರೀಕ್ಷೆಯಂತೆ ಮಳೆಯಾಗದಿದ್ದರೆ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕ ಎದುರಾಗಿದೆ.




