Mangaluru: ಮಳೆರಾಯನ ಆರ್ಭಟಕ್ಕೆ ಕುಸಿದ ಸೂರು: ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

Mangaluru News: ಮಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ನಾಗುರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಭೂಕುಸಿತದ ಪರಿಣಾಮ ಮಣ್ಣು ಕುಸಿದು ಮನೆ ಮೇಲೆ ಬಿದ್ದಿದೆ. ಈ ವೇಳೆ ಆ ಮನೆಯಲ್ಲಿದ್ದ ಆರು ಜನ ಮಣ್ಣಿನಡಿ ಸಿಲುಕಿದ್ದಾರೆ. ಇದರಲ್ಲಿ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಆದರೆ ಇನ್ನುಳಿದ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಮಹಿಳೆ ಮಣ್ಣಿನ ಭಾರ ತಾಳಲಾರದೇ ಸಾವನ್ನಪ್ಪಿದ್ದಾರೆ.

ಅನಾಮಿಕ ಚೌರಾಸಿಯಾ(8), ಪರಿ(4), ಪಕ್ಕದ ಮನೆಯ ಶಾಂತಾ(46) ಮೃತರಾಗಿದ್ದಾರೆ. ಇನ್ನು ಶಾಂತಾ ಸ್ಥಳೀಯರಾಗಿದ್ದು, ಉಳಿದವರು ಬಿಹಾರದವರಾಗಿದ್ದಾರೆ. ಲಾಲ್‌ ಬಾಬು ಮತ್ತು ಪತ್ನಿ, ನಾಲ್ವರು ಹೆಣ್ಣು ಮಕ್ಕಳು ಕೆಲಸ ಅರಸಿ ಇಲ್ಲಿ ಬಂದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅದರಲ್ಲಿ ಲಾಲ್‌ ಬಾಬು, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಉಳಿದ ಇಬ್ಬರು ಹೆಣ್ಣು ಮಕ್ಕಳು ಮತ್ತು ನೆರೆಮನೆಯ ಮಹಿಳೆ ಸಾವಿಗೀಡಾಗಿದ್ದಾರೆ.

ಮಾಹಿತಿ ತಿಳಿದ ಪೋಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಕ್ಕ ಪಕ್ಕದ ಮನೆಯವರಿಗೆ ಸಣ್ಣ ಪುಟ್ಟ ಸಮಸ್ಯೆಯಾಗಿದ್ದು, ನಾವೆಲ್ಲರೂ ದೇವರ ದಯೆಯಿಂದ ಪಾರಾಗಿದ್ದೇವೆ ಎಂದು ಹೇಳಿದ್ದಾರೆ.

ಮೃತರ ಮನೆಯವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೇ, ಗಾಯಾಳುಗಳ ಚಿಕಿತ್ಸಾ ವೆಚ್ಚ ಕೂಡ ಜಿಲ್ಲಾಡಳಿತವೇ ಭರಿಸಲಿದೆ. ಅಲ್ಲದೇ, ಮನೆ ಕಳೆದುಕ“ಂಡವರಿಗೆ ಪರಿಹಾರ ನೀಡುವ ನಿರ್ಧಾರವೂ ಮಾಡಿದ್ದಾರೆ.

About The Author