Gold Rate: ಸತತ ಏರಿಕೆಯಿಂದ ಆಭರಣ ಪ್ರಿಯರ ಕೈಗೆಟುಕದಂತಾಗಿದ್ದ ಚಿನ್ನದ ಬೆಲೆ ಇದೀಗ ಭಾರೀ ಕುಸಿತ ಕಂಡಿದೆ. ಒಂದೇ ತಿಂಗಳಲ್ಲಿ ಸುಮಾರು 50 ಸಾವಿರ ರೂಪಾಯಿ ಇಳಿಕೆಯಾಗಿರುವುದು ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇರಾನ್–ಅಮೆರಿಕ ಉದ್ವಿಗ್ನತೆಯ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ದರ ₹1,92,991ಕ್ಕೆ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,42,413ಕ್ಕೆ ಇಳಿದಿದೆ.
ಇದೇ ವೇಳೆ ದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ ₹1,45,800ಕ್ಕೆ ಕುಸಿದಿದೆ. ಈ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಸುಮಾರು ₹50 ಸಾವಿರದಷ್ಟು ಇಳಿಕೆಯಾಗಿದೆ.
ತಜ್ಞರ ಪ್ರಕಾರ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಹಾಗೂ ಡಾಲರ್ ಮೌಲ್ಯ ಬಲಿಷ್ಠವಾಗುತ್ತಿರುವುದು ಚಿನ್ನದ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್ 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ದಾಖಲಿಸಿರುವ ಅತಿದೊಡ್ಡ ಮಾಸಿಕ ಕುಸಿತ ಇದಾಗಿದೆ. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿರುವುದು ಆಭರಣ ಖರೀದಿದಾರರಿಗೆ ಹಾಗೂ ಹೂಡಿಕೆದಾರರಿಗೆ ನಿರಾಳತೆ ತಂದಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಚಿನ್ನದ ದರದ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಸಾಧ್ಯತೆಯಿದೆ.




