Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಮತ್ತೆ ಬೈಕ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಕಾಲೊನಿಗಳಿಗೆ ಎಂಟ್ರಿ ಕೊಟ್ಟು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕ್ಷಣಾರ್ಧದಲ್ಲೇ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗುತ್ತಿರುವ ಆರೋಪ ಕೇಳಿಬಂದಿದೆ. ತಡರಾತ್ರಿ ಕಾಲೊನಿಗಳಿಗೆ ನುಗ್ಗುವ ಖದೀಮರು, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕೆಲವೇ ಕ್ಷಣಗಳಲ್ಲಿ ಎಗರಿಸಿ ಪರಾರಿಯಾಗುತ್ತಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕೇಶ್ವಾಪುರ ಪೊಲೀಸರು ತನಿಖೆ ಆರಂಭಿಸಿದ್ದು, ಬೈಕ್ ಕಳ್ಳರ ಜಾಲವನ್ನು ಬೇಧಿಸಲು ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚಿನ ತಿಂಗಳುಗಳಲ್ಲಿ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೂನ್ 10ರಂದು ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರ ಮನೆಯಲ್ಲಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 6 ಲಕ್ಷ ರೂಪಾಯಿ ನಗದು ಕಳುವಾಗಿತ್ತು. ಇದಕ್ಕೂ ಮೊದಲು ಶಬರಿ ನಗರದಲ್ಲಿ ಮುಸುಕುಧಾರಿ ಗ್ಯಾಂಗ್ ಮನೆ ದರೋಡೆಗೆ ಯತ್ನಿಸಿದ್ದ ಘಟನೆ ಕೂಡ ಆತಂಕ ಸೃಷ್ಟಿಸಿತ್ತು.
ಈಗ ಮತ್ತೆ ಬೈಕ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ನಿವಾಸಿಗಳಲ್ಲಿ ಭಯ ಹೆಚ್ಚಿಸಿದೆ. ನಗರದಲ್ಲಿ ರಾತ್ರಿ ಗಸ್ತು ಹೆಚ್ಚಿಸಿ, ಸರಣಿ ಕಳ್ಳತನಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.




