Uttara Kannada News: ಮುಂಡಗೋಡ ಪಟ್ಟಣದ ಆನಂದ ನಗರದಲ್ಲಿ ವಾಸವಾಗಿರುವ 35 ಕುಟುಂಬಗಳಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಪಟ್ಟಣ ಪಂಚಾಯಿತಿಯ ಕಂದಾಯ ನಿರೀಕ್ಷಕ ಮಂಜುನಾಥ ಮುಚ್ಚುಂಡಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಹಲವು ದಶಕಗಳಿಂದ ಈ ಪ್ರದೇಶದಲ್ಲಿ ಬಡ ಕುಟುಂಬಗಳು ನೆಲೆಸಿದ್ದು, ತಮ್ಮ ಮಾಹಿತಿಗಳನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಂಚಾಯಿತಿ ಸಿಬ್ಬಂದಿಗಳ ತಪ್ಪಿನಿಂದಾಗಿ ಈಗ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವಾಸಿಗಳು ನೋಟಿಸ್ ಪ್ರತಿಗಳೊಂದಿಗೆ ಪಟ್ಟಣ ಪಂಚಾಯಿತಿಗೆ ತೆರಳಿ, ಅಧಿಕಾರಿ ಮಂಜುನಾಥ ಮುಚ್ಚುಂಡಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬೆಂಗಳೂರಿನ ನ್ಯಾಯಾಲಯಕ್ಕೆ ಹೋಗಲು ಬಡವರಿಗೆ ಆರ್ಥಿಕವಾಗಿ ಕಷ್ಟವಾಗುವುದರಿಂದ, ಈ ಸಮಸ್ಯೆಯನ್ನು ಪಂಚಾಯಿತಿ ಮಟ್ಟದಲ್ಲೇ ಬಗೆಹರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ಸ್ಥಳೀಯರ ಅನುಕೂಲಕ್ಕಾಗಿ ಕೂಡಲೇ ‘ನಮೂನೆ 3’ ಅನ್ನು ವಿತರಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ನಿರೀಕ್ಷಕರು, ಈ ವಿಷಯವನ್ನು ಮುಖ್ಯಅಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಜುಲೈ 20ರವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ನಿವಾಸಿಗಳು ಮಾತ್ರ ಜುಲೈ 10ರ ಒಳಗೆ ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ.
ಆನಂದ ನಗರ, ಇಂದಿರಾ ನಗರ, ಗಣೇಶ ನಗರ ಮತ್ತು ಗಾಂಧಿ ನಗರ ಸೇರಿದಂತೆ ಪಟ್ಟಣದ ವಿವಿಧ ಕಡೆಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಕುಟುಂಬಗಳು ಅರಣ್ಯ ಭೂಮಿ ಎಂದು ದಾಖಲಾಗಿರುವ ಜಾಗದಲ್ಲಿ ನೆಲೆಸಿವೆ. ಕಳೆದ ಕೆಲ ತಿಂಗಳುಗಳಿಂದ ಹಂತ ಹಂತವಾಗಿ ಇವರಿಗೆ ನ್ಯಾಯಾಲಯದ ನೋಟಿಸ್ಗಳು ಬರುತ್ತಿವೆ.
ಬಹುತೇಕ ಮನೆಗಳು ಮಹಿಳೆಯರ ಹೆಸರಿನಲ್ಲಿ ದಾಖಲಾಗಿರುವುದರಿಂದ, ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗಿದೆ ಎಂದು ಮಾಜಿ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.




