Political News: ಭಾರತ ಜೋಡೋ ಭವನದಲ್ಲಿ ನಡೆದ ಪ್ರಚಾರ ಸಮಿತಿಯ ವಿಚಾರ ಸಂಕಿರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು ಆರ್ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಹೆಮ್ಮೆಯಿಂದ ಹಿಂದು ಎಂದು ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವ ಹಿಂದು ಧರ್ಮ ಮಹಾತ್ಮಾ ಗಾಂಧಿ, ವಿವೇಕಾನಂದ, ನಾರಾಯಣಗುರು, ಕನಕದಾಸ, ಬಸವಣ್ಣ ಹೇಳುವ ಧರ್ಮಾ ಪಾಲಿಸುತ್ತೇನೆ. ಗೋಲ್ವಾಲ್ಕರ್, ಗೋಡ್ಸೆ, ಹೆಡಿಗೆವಾರ್ ಹೇಳುವ ಹಿಂದೂ ಧರ್ಮ ಪಾಲಿಸುವುದಿಲ್ಲ. ಜಾತ್ಯಾತೀತ ತತ್ವ ಎಂದರೆ ಎಲ್ಲಾ ಧರ್ಮಗಳು ಒಂದಾಗಿ ಸಾಗುವುದು ಎಂದು ಹರಿಪ್ರಸಾದ್ ಹೇಳಿದ್ದಾರೆ.
ಭಾರತ ದೇಶದ ವೈವಿಧ್ಯತೆ ಇಡೀ ಪ್ರಪಂಚದಲ್ಲಿ ಎಲ್ಲೂ ಸಿಕ್ಕುವುದಿಲ್ಲ. 7 ಧರ್ಮಗಳು ಇರುವ ದೇಶ ಭಾರತ. 21 ಅಧಿಕೃತ ಭಾಷೆ, ಅನಧಿಕೃತವಾಗಿರುವ 19 ಸಾವಿರ ಭಾಷೆಗಳಿವೆ. ಇಂತಹ ವೈವಿಧ್ಯತೆ ನಾಶ ಮಾಡುತ್ತಿದ್ದಾರೆ. ಒಂದು ರಾಷ್ಟ್ರ ಒಂದು ಶಿಕ್ಷಣ, ಒಂದು ದೇಶ ಒಬ್ಬ ನಾಯಕ, ಒಂದು ದೇಶ ಒಂದು ಧರ್ಮ ಮಾಡಲು ಹೊರಟಿದ್ದಾರೆ. ಕೆಲವರನ್ನು ದೂರವಿಡಲು ಈ ರೀತಿ ಮಾಡುತ್ತಿದ್ದಾರೆ. ಇದನ್ನು ಮಾಡಲು ಸಾಧ್ಯವಿಲ್ಲ. ಬಹುತ್ವ ಭಾರತದ ಆತ್ಮ.
ಕೆಪಿಸಿಸಿ ಪ್ರಚಾರ ಸಮಿತಿಯ ಕೆಲಸ ಕಾಂಗ್ರೆಸ್ ಸರ್ಕಾರದ ಆಚಾರ ವಿಚಾರ ಪ್ರಚಾರ ಮಾಡುವುದಾಗಿದೆ. ಅದರ ಹೊರತಾಗಿ ನೀವು ಬೇರೆ ಏನನ್ನೂ ಮಾಡಬೇಡಿ. ಬೆಂಗಳೂರಿನಲ್ಲಿ ಸಧ್ಯದಲ್ಲೇ ಚುನಾವಣೆ ಬರಲಿದೆ. ರಾಮ್ ಮಾಧವ್ ಎಂಬ ಆರ್ ಎಸ್ಎಸ್ ನಿಂದ ಬೆಂಗಳೂರು ಉಸ್ತುವಾರಿ ವಹಿಸಿದ್ದಾರೆ. ಅವರ ಇತಿಹಾಸವನ್ನು ನೀವು ನೋಡಬೇಕು. ಅವರು ಕೊಲಂಬೊ, ಲಂಡನ್ ನಲ್ಲಿ 4 ಸಭೆಗಳನ್ನು ಮಾಡಿದ್ದು, ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಗೆ ಗುಪ್ತ ಸಭೆ ಮಾಡಿದ್ದಾರೆ. ಇತ್ತೀಚೆಗೆ ಅವರ ಗುರುಗಳಾದ ಮೋಹನ್ ಭಾಗವತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ನಾನು ಮಾತನಾಡಿದಾಗ 2 ವರ್ಷ ನನ್ನ ಹಿಂದೆ ಬೀದ್ದಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಬಳಿಕ ನನ್ನ ಸಹವಾಸ ಬಿಟ್ಟರು ಎಂದು ಟೀಕಿಸಿದ್ದಾರೆ.
ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಯಾವುದೇ ಯೋಧರು ಸತ್ತಿಲ್ಲ ಎಂದು ಹೇಳಿದ್ದರು. ಆದರೆ ಮೊನ್ನೆ ರಾಜನಾಥ್ ಸಿಂಗ್ ಅವರು 6 ಸೈನಿಕರು ಸತ್ತಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ಇದರಲ್ಲೇ ಅರ್ಥವಾಗುತ್ತದೆ. ದೇಶಕ್ಕೆ ಪ್ರಾಣಕೊಟ್ಟವರ ಹೆಸರು ಹೇಳಲು ಇವರಿಗೆ ಸಾಧ್ಯವಾಗುವುದಿಲ್ಲ. ಆಪರೇಷನ್ ಸಿಂಧೂರ್ ಆಗಿ 2 ತಿಂಗಳಾಗಿದ್ದು, ಆಗಲೇ ರಾಮ್ ಮಾಧವ್ ಅವರು ಲಂಡನ್ ನಲ್ಲಿ ಸಭೆ ಮಾಡಿದ್ದಾರೆ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ಭಯೋತ್ಪಾದನೆ ನಿಗ್ರಹವಾಗುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು ಎಂದು ಹರಿಪ್ರಸಾದ್ ಹೇಳಿದ್ದಾರೆ.
ಬಿಜೆಪಿಯವರು ಚುನಾವಣೆ ಬಂದಾಗ, ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್, ಮಂಗಲಸೂತ್ರದ ಬಗ್ಗೆ ಮಾತನಾಡುತ್ತಾರೆ. ರಾಮ್ ಮಾಧವ್ ಅವರು ಜಿಬಿಎ ಚುನಾವಣೆಗೆ ಬರುವಾಗ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪಾಕಿಸ್ತಾನದವರೊಂದಿಗೆ ರಹಸ್ಯ ಸಭೆ ಮಾಡಲು ಅಧಿಕಾರ ಕೊಟ್ಟವರು ಯಾರು? ಇವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ, ಸಂಸದರೂ ಅಲ್ಲ. ಆರ್ ಎಸ್ಎಸ್ ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಎಂದು ಹರಿಪ್ರಸಾದ್ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಯಾವ ಅಧಿಕಾರ ಇಟ್ಟುಕೊಂಡು ಆರ್ ಎಸ್ಎಸ್ ನವರು ವಿದೇಶಾಂಗ ನೀತಿ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ? ಪಾಕಿಸ್ತಾನದವರೊಂದಿಗಿನ ಗುಪ್ತ ಸಭೆ ಬಗ್ಗೆ ದೇಶದ ಜನರಿಗೆ ಯಾಕೆ ಮಾಹಿತಿ ನೀಡಿಲ್ಲ? ಆಪರೇಷನ್ ಸಿಂಧೂರ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಹೆಸರುಗಳನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ? ಇಂತಹ ಪ್ರಶ್ನೆಗಳನ್ನು ನಾವು ಕೇಳಬೇಕಿದೆ. ಜನರನ್ನು ಜಾಗೃತ ಮಾಡಬೇಕಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.




