Rain Alert: ಕರ್ನಾಟಕದಲ್ಲಿ ವರುಣ ರೌದ್ರಾವತಾರ: ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ..

Rain Alert: ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಜುಲೈ 7ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ.

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 7ರವರೆಗೆ ಕೆಲ ದಿನಗಳಲ್ಲಿ 204.5 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನದಿಗಳು ಉಕ್ಕಿ ಹರಿಯುವ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ನದಿ ತೀರ ಹಾಗೂ ಗುಡ್ಡಗಾಡು ಪ್ರದೇಶದ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಜುಲೈ 3 ಮತ್ತು 4ರಂದು ಕರಾವಳಿ ಜಿಲ್ಲೆಗಳಿಗೆ, ಜುಲೈ 5ರಿಂದ 7ರವರೆಗೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿಗೆ ಜುಲೈ 4ರವರೆಗೆ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಜುಲೈ 7ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸ್ಥಳೀಯ ಪ್ರವಾಹ, ರಸ್ತೆಗಳಲ್ಲಿ ನೀರು ನಿಲ್ಲುವುದು ಹಾಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಜುಲೈ 10ರಿಂದ 11ರವರೆಗೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸುವುದು, ಪ್ರವಾಸಿ ತಾಣಗಳಿಗೆ ತೆರಳುವವರು ಮುನ್ನೆಚ್ಚರಿಕೆ ವಹಿಸುವುದು ಹಾಗೂ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಮುಂದಿನ ಕೆಲ ದಿನಗಳು ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಪಾಲಿಸಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

About The Author