Karnataka TV News: ಮನೆ-ಮನೆ ಸರ್ವೇ ಬದಲು ದೇವಸ್ಥಾನದಲ್ಲೇ ಎಸ್‌ಐಆರ್?

Hubli News: ಚುನಾವಣಾ ಆಯೋಗದ ನಿರ್ದೇಶನದಂತೆ ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಪರಿಷ್ಕರಣೆ ಮಾಡಬೇಕಿದ್ದ ಎಸ್‌ಐಆರ್ ಪ್ರಕ್ರಿಯೆ, ಹುಬ್ಬಳ್ಳಿಯಲ್ಲಿ ನಿಯಮಾನುಸಾರ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ವಿವಿಧ ಬಡಾವಣೆಗಳಿಗೆ ತೆರಳಬೇಕಿದ್ದ ಬಿಎಲ್‌ಒಗಳು ದೇವಸ್ಥಾನಗಳಲ್ಲೇ ಮತದಾರರನ್ನು ಕರೆಸಿ ದಾಖಲೆ ಪರಿಶೀಲನೆ ನಡೆಸುತ್ತಿರುವ ದೃಶ್ಯಗಳು ಕರ್ನಾಟಕ ಟಿವಿಗೆ ಲಭ್ಯವಾಗಿವೆ.

ಇದು ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಗಣೇಶ ದೇವಸ್ಥಾನ… ಮತ್ತೊಂದು ದೃಶ್ಯ ಮಾವಳ್ಳಿ ಪ್ಲಾಟ್‌ನ ತುಳಜಾಭವಾನಿ ದೇವಸ್ಥಾನದ್ದು. ಚುನಾವಣಾ ಆಯೋಗದ ಸೂಚನೆಯಂತೆ ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸಬೇಕಿದ್ದ ಬಿಎಲ್‌ಒಗಳು, ಸಾರ್ವಜನಿಕರನ್ನು ದೇವಸ್ಥಾನಕ್ಕೆ ಕರೆಸಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಮನೆ-ಮನೆಗೆ ತೆರಳಿ ದಾಖಲೆ ಪರಿಶೀಲನೆ ನಡೆಸುವ ಬದಲು, ಒಂದೇ ಸ್ಥಳದಲ್ಲಿ ವಿವಿಧ ಬಡಾವಣೆಗಳ ಮತದಾರರನ್ನು ಕರೆಯಿಸಿಕೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಮಾಹಿತಿ ಪರಿಶೀಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ. ಆದರೆ ನೆಲಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಮಾತ್ರ ಆ ಸೂಚನೆಗಳಿಗೆ ವಿರುದ್ಧವಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಸಾಕ್ಷ್ಯಾಧಾರಗಳೊಂದಿಗೆ ಬೆಳಕಿಗೆ ಬಂದಿರುವ ಈ ಕಾರ್ಯವೈಖರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ಮತ್ತು ಚುನಾವಣಾ ಆಯೋಗದ ನಿಯಮಗಳಂತೆ ನಡೆಯಬೇಕೆಂಬ ಒತ್ತಾಯ ಕೇಳಿಬಂದಿದೆ.

About The Author