Hubli Political News: 25ನೇ ಅವಧಿಯಲ್ಲೂ ಪಾಲಿಕೆ ಚುಕ್ಕಾಣಿ ಬಿಜೆಪಿ ತೆಕ್ಕೆಗೆ

Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ದುರ್ಗಮ್ಮ ಬಿಜವಾಡ ಮಹಾಪೌರರಾಗಿ, ರತ್ನಾಭಾಯಿ ನಾಜರೆ ಉಪಮಹಾಪೌರರಾಗಿ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಕೆ.ಎಸ್. ಜಾನಕಿ ಅವರ ನೇತೃತ್ವದಲ್ಲಿ ನಡೆಯಿತು. ಎಸ್‌ಸಿ ಮಹಿಳೆ ಮೀಸಲು ಮೇಯರ್ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ದುರ್ಗಮ್ಮ ಬಿಜವಾಡ, ಸಾಮಾನ್ಯ ಮಹಿಳೆ ಮೀಸಲು ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಜರೆ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 92 ಸದಸ್ಯರ ಬಲ ಹೊಂದಿರುವ ಪಾಲಿಕೆಯಲ್ಲಿ 88 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ ಚಲಾಯಿಸಿದರು. ಮೇಯರ್ ಸ್ಥಾನಕ್ಕೆ ದುರ್ಗಮ್ಮ ಬಿಜವಾಡ 50 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.

ಬಿಜೆಪಿಯಲ್ಲಿ ಎಸ್‌ಸಿ ಮಹಿಳಾ ಸದಸ್ಯರಿಲ್ಲದ ಕಾರಣ, ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ದುರ್ಗಮ್ಮ ಬಿಜವಾಡ ಅವರಿಗೆ ಮೇಯರ್ ಸ್ಥಾನ ಒಲಿದಿದೆ. ಈ ಹಿಂದೆ 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿರುವ ಅವರು, ನಗರದ ಸ್ವಚ್ಛತೆ, ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪಾಲಿಕೆ ಆವರಣ ಬಿಜೆಪಿ ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿತು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಮಹಾಪೌರ ಮತ್ತು ಉಪಮಹಾಪೌರರಿಗೆ ಅಭಿನಂದನೆ ಸಲ್ಲಿಸಿದರು.

25ನೇ ಅವಧಿಯಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತನ್ನ ಆಡಳಿತದ ಹಿಡಿತವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. ಈಗ ನಗರದ ಅಭಿವೃದ್ಧಿ, ಸ್ವಚ್ಛತೆ, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಸಮಸ್ಯೆಗಳ ಪರಿಹಾರದತ್ತ ನೂತನ ಆಡಳಿತ ಯಾವ ರೀತಿಯ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author