Hubli news: ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ ವರುಣ ದೇವ

Hubli News: ಮಳೆಗಾಗಿ ಆಕಾಶದತ್ತ ಚಾತಕ ಪಕ್ಷಿಯಂತೆ ಕಾದಿದ್ದ ರೈತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ರೈತರು ಮತ್ತೆ ಹೊಲದತ್ತ ಮುಖ ಮಾಡಿದ್ದು, ಮುಂಗಾರು ಬೆಳೆಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರು ಇದೀಗ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮಳೆ ಬಂದ ಹಿನ್ನೆಲೆಯಲ್ಲಿ ಹೊಲಗಳು ಮತ್ತೆ ಹಸಿರಿನಿಂದ ಕಂಗೊಳಿಸುತ್ತಿದ್ದು, ರೈತರಲ್ಲಿ ನಿಟ್ಟುಸಿರು ಮೂಡಿಸಿದೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ಮಂಟೂರು, ಬಂಡಿವಾಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹೆಸರು, ಉದ್ದು, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳಲ್ಲಿ ಬೆಳೆದಿರುವ ಕಳೆ ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಎಡೆಗುಂಟೆ ಹೊಡೆದು ಕಳೆ ನಿಯಂತ್ರಿಸುವ ಮೂಲಕ ಬೆಳೆಗಳ ಸಂರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ.

ಮಳೆಯ ಕೊರತೆಯಿಂದ ಬೆಳೆ ಉಳಿಯುತ್ತದೆಯೋ ಎಂಬ ಆತಂಕದಲ್ಲಿದ್ದ ರೈತರಿಗೆ ಈ ಮಳೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ. ಹೊಲಗಳಲ್ಲಿ ಕೃಷಿ ಉಪಕರಣಗಳ ಸದ್ದು ಮತ್ತೆ ಕೇಳಿಬರುತ್ತಿದ್ದು, ರೈತರು ಬೆಳಗ್ಗೆಯಿಂದ ಸಂಜೆವರೆಗೂ ಬೆಳೆಗಳ ಆರೈಕೆಯಲ್ಲಿ ನಿರತರಾಗಿದ್ದಾರೆ.

ಇನ್ನೂ ಉತ್ತಮ ಪ್ರಮಾಣದಲ್ಲಿ ಮಳೆಯಾದರೆ ಮುಂಗಾರು ಬೆಳೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸ ರೈತರಲ್ಲಿದೆ. ಸದ್ಯ ಸುರಿದಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದ್ದು, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮತ್ತೆ ಕೃಷಿಯ ಕಳೆ ಗರಿಗೆದರಿದೆ.

About The Author