Hubli News: ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ರೋಬೋಟಿಕ್ ಶಸ್ತ್ರಚಿಕಿತ್ಸೆ

Hubli News: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೆಎಂಸಿಆರ್‌ಐ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಖಾಸಗಿ ಆಸ್ಪತ್ರೆಗಳಲ್ಲೇ ಸೀಮಿತವಾಗಿದ್ದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇದೀಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯವಾಗಿರುವುದು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಆಶಾಕಿರಣವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ಲಭ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ತೆರೆ ಎಳೆಯುವಂತೆ, ಕೆಎಂಸಿಆರ್‌ಐ ರಾಜ್ಯದಲ್ಲೇ ಮೊದಲ ಬಾರಿಗೆ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. 55 ವರ್ಷದ ಮಹಿಳೆಯೊಬ್ಬರ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ರೋಬೋಟ್ ಆರ್ಮ್ ಸಹಾಯದಿಂದ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ರೋಬೋಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ನಡೆಸುವುದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಹಾನಿ ಕಡಿಮೆಯಾಗುತ್ತದೆ. ರಕ್ತಸ್ರಾವ ಕಡಿಮೆ ಆಗುವುದರ ಜೊತೆಗೆ, ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚಾಗಿ ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ. ಇದುವರೆಗೆ ಈ ಸೌಲಭ್ಯ ಖಾಸಗಿ ಆಸ್ಪತ್ರೆಗಳಲ್ಲೇ ಲಭ್ಯವಿದ್ದು, ದುಬಾರಿ ವೆಚ್ಚದಿಂದ ಸಾಮಾನ್ಯ ಜನರಿಗೆ ಕೈಗೆಟುಕುತ್ತಿರಲಿಲ್ಲ.

ಸುಮಾರು ₹2.71 ಕೋಟಿ ವೆಚ್ಚದ ಅತ್ಯಾಧುನಿಕ ರೋಬೋಟಿಕ್ ಯಂತ್ರವನ್ನು ಕೆಎಂಸಿಆರ್‌ಐನ ಅರ್ಥೋಪೆಡಿಕ್ ವಿಭಾಗದಲ್ಲಿ ಅಳವಡಿಸಲಾಗಿದೆ. ಮೊಣಕಾಲು ಹಾಗೂ ಚಪ್ಪೆ ಬದಲಾವಣೆ ಸೇರಿದಂತೆ ವಿವಿಧ ಎಲುಬು-ಕೀಲು ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ಸುರಕ್ಷಿತ ಹಾಗೂ ನಿಖರವಾಗಿ ನಡೆಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೇ ಮೊದಲ ಬಾರಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುವ ಅವಕಾಶ ಸೃಷ್ಟಿಯಾಗಿದ್ದು, ಉತ್ತರ ಕರ್ನಾಟಕದ ಸಾವಿರಾರು ರೋಗಿಗಳಿಗೆ ಇದು ದೊಡ್ಡ ವರವಾಗುವ ನಿರೀಕ್ಷೆಯಿದೆ.

About The Author