Political News: ಕರ್ನಾಟಕ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಾಮಚಂದ್ರೇಗೌಡ (88) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಯೋಸಹಜ ಅನಾರೋಗ್ಯ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಸಹ ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ ರಾಮಚಂದ್ರಗೌಡರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ರಾಜ್ಯದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆಗಳು ಅಪಾರ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ರಾಮಚಂದ್ರಗೌಡರು ಸಲ್ಲಿಸಿದ ಸೇವೆಯೂ ಸದಾ ನೆನಪಿನಲ್ಲಿ ಉಳಿಯುವಂತದ್ದು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ರಾಮಚಂದ್ರಗೌಡರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ದಾರೆ.
ಇವರ ನಿಧನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮಾಜಿ ಮಂತ್ರಿಗಳು ಹಾಗೂ ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀ ರಾಮಚಂದ್ರ ಗೌಡರ ನಿಧನದ ವಾರ್ತೆ ತಿಳಿದು ಬಹಳ ದುಃಖವಾಯಿತು. ಶ್ರೀಯುತರು ನನ್ನ ಆತ್ಮೀಯರಾಗಿದ್ದರು ಹಾಗೂ ಮೊದಲ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಂಪುಟ ಸದಸ್ಯರಾಗಿದ್ದರು. ಅವರು ಸ್ನೇಹಶೀಲರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು ಎಂದು ಕುಮಾರಸ್ವಾಮಿ ನೆನಪಿಸಿಕ“ಂಡಿದ್ದಾರೆ.
ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು, ಮಾಜಿ ಸಚಿವರು, ಸುಮಾರು ಮೂರು ದಶಕಗಳ ಕಾಲ ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಆದರ್ಶಪ್ರಾಯ ಶಾಸಕರಾಗಿದ್ದ ಧೀಮಂತ ನೇತಾರ ಶ್ರೀ ರಾಮಚಂದ್ರ ಗೌಡರು ವಿಧಿವಶರಾದ ಸುದ್ದಿ ಅತೀವ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿ, ಜನಸಂಘದ ದಿನಗಳಿಂದಲೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ದುಡಿದ ಶ್ರೀ ರಾಮಚಂದ್ರ ಗೌಡರ ನಿಧನದಿಂದ ಪಕ್ಷ ತನ್ನ ಹಿರಿಯ ನಾಯಕನನ್ನು ಕಳೆದುಕೊಂಡಿದ್ದು ಭರಿಸಲಾಗದ ನಷ್ಟವಾಗಿದೆ. ಬೆಂಗಳೂರು ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಜನಸಾಮಾನ್ಯರ ಧ್ವನಿಯಾಗಿ ಅವರು ಸಲ್ಲಿಸಿದ ಸುದೀರ್ಘ ಸೇವೆ ಆದರ್ಶಪ್ರಾಯವಾದದ್ದು. ಜೊತೆಗೆ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬೆಳೆಸುವಲ್ಲಿ ಅವರು ವಹಿಸಿದ ಮಹತ್ತರ ಪಾತ್ರ ಮತ್ತು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.




