ಧಾರವಾಡವನ್ನು ಬೆಚ್ಚಿಬೀಳಿಸಿದ ವೈದ್ಯನ ಹ*ತ್ಯೆ..! 8 ವರ್ಷದ ಮಗುವಿನ ಮೇಲೂ ಚಾಕುವಿನಿಂದ ದಾಳಿ..!

Dharwad News: ವಿದ್ಯಾಕಾಶಿ ಧಾರವಾಡ… ಶಾಂತಿಯ ನಗರವೆಂದೇ ಗುರುತಿಸಿಕೊಂಡಿರುವ ಈ ನಗರದಲ್ಲಿ ನಡೆದ ಭೀಕರ ಘಟನೆ ಇಡೀ ಜನತೆಯನ್ನು ಬೆಚ್ಚಿಬೀಳಿಸಿದೆ. ಜೀವ ಉಳಿಸುತ್ತಿದ್ದ ವೈದ್ಯನೊಬ್ಬ ತನ್ನದೇ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಎಂಟು ವರ್ಷದ ಪುತ್ರ ಆಸ್ಪತ್ರೆಯಲ್ಲಿ ಜೀವನ-ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಪ್ರಕರಣದ ಆರೋಪ ಕೇಳಿಬಂದಿರುವುದು ವೈದ್ಯನ ಪತ್ನಿಯ ಮೇಲೆಯೇ.

ಧಾರವಾಡದ ಬಾರಾಕೋಟ್ರಿ ಸಮೀಪದ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣವರ (45) ಅವರನ್ನು ಅವರ ಪತ್ನಿ ಪ್ರಿಯಾಂಕಾ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಪುತ್ರ ನೇಹಿತ್ ಮೇಲೂ ಚಾಕು ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ಬಳಿಕ ವೈದ್ಯರ ಮೃತದೇಹ ಇದ್ದ ಕೋಣೆಯಲ್ಲೇ ಪತ್ನಿ ಬೆಡ್ ಮೇಲೆ ಕುಳಿತು ಮೊಬೈಲ್ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ರಕ್ತಸ್ರಾವದಿಂದ ನರಳುತ್ತಿದ್ದ ಮಗುವನ್ನು ಸ್ವತಃ ಮಡಿಲಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಜೀವ ಉಳಿಸಲು ಹರಸಾಹಸ ಪಡುತ್ತಿದ್ದಾರೆ.

ಘಟನೆ ನಡೆದ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವೈದ್ಯ ಕಿರಣ್ ಅವರ ಸಹೋದರಿಯರ ಕಣ್ಣೀರು ನೋಡುಗರ ಮನಕಲಕುವಂತಿತ್ತು. ಸ್ಥಳದಲ್ಲಿ ಪೊಲೀಸರು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕವೇ ಬಹಿರಂಗವಾಗಬೇಕಿದೆ.

ಈ ಪ್ರಕರಣದಲ್ಲಿ ಕೌಟುಂಬಿಕ ಕಲಹವೇ ಕಾರಣವೇ? ಪೂರ್ವಯೋಜಿತ ಸಂಚುವೇ? ಅಥವಾ ಕ್ಷಣಿಕ ಆಕ್ರೋಶದಿಂದ ಈ ಕೃತ್ಯ ನಡೆದಿದೆಯೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗುವಿನ ಆರೋಗ್ಯ ಸ್ಥಿರವಾದ ಬಳಿಕ ಅದರ ಹೇಳಿಕೆ, ವಿಧಿವಿಜ್ಞಾನ ವರದಿ ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣದ ಸಂಪೂರ್ಣ ಸತ್ಯ ಹೊರಬೀಳುವ ಸಾಧ್ಯತೆಯಿದೆ.

ಒಟ್ಟಾರೆ, ಜೀವ ಉಳಿಸುತ್ತಿದ್ದ ವೈದ್ಯನೊಬ್ಬ ತನ್ನದೇ ಮನೆಯಲ್ಲಿ ಹತ್ಯೆಯಾಗಿರುವುದು ಮತ್ತು ಎಂಟು ವರ್ಷದ ಮಗುವಿನ ಮೇಲೂ ಮಾರಣಾಂತಿಕ ದಾಳಿ ನಡೆದಿರುವುದು ಧಾರವಾಡ ನಗರವನ್ನೇ ಬೆಚ್ಚಿಬೀಳಿಸಿದೆ. ಒಂದೇ ಮನೆಯೊಳಗೆ ನಡೆದ ಈ ಭೀಕರ ಕೃತ್ಯದ ಹಿಂದಿನ ನಿಜವಾದ ಕಾರಣವೇನು ಎಂಬುದನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಅಂತಿಮ ಸತ್ಯ ತನಿಖೆಯ ಬಳಿಕವೇ ಹೊರಬರಬೇಕಾಗಿದೆ.

ಕ್ಯಾಮೆರಾ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ

About The Author