Political News: ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ತೋಟ ಹಾನಿಗೀಡಾಗಿದ್ದು, 1 ಮರಕ್ಕೆ 16 ರೂ. ಪರಿಹಾರ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಿಸಿದೆ. ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಬೆಳೆವ ಬೆಳೆಗೆ ಇಷ್ಟು ಕಡಿಮೆ ಪರಿಹಾರ ನೀಡಿದರೆ, ಬದುಕೋದಾದ್ರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಭಿಕ್ಷುಕರಲ್ಲ, ಮುಖ್ಯಮಂತ್ರಿ ಅವರೇ! ಒಂದು ಅಡಿಕೆ ಮರವನ್ನು ನೆಟ್ಟು, ಮಕ್ಕಳಂತೆ ಸಾಕಿ, ಅದು ಫಸಲು ಕೊಡುವ ಹಂತಕ್ಕೆ ತರಲು ರೈತ ತನ್ನ ಜೀವನದ ಅಮೂಲ್ಯ ವರ್ಷಗಳನ್ನು ಬೆವರು, ಶ್ರಮ ಮತ್ತು ಸಾಲದ ಹೊರೆಯೊಂದಿಗೆ ಕಳೆಯಬೇಕಾಗುತ್ತದೆ. ಆದರೆ ಆ ಶ್ರಮದ ಬೆಲೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟೆಂದರೆ ಒಂದು ಮರಕ್ಕೆ ಕೇವಲ ₹16! ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಬಿರುಗಾಳಿ-ಮಳೆಗೆ 12 ಲಕ್ಷಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕಚ್ಚಿವೆ. ರೈತರ ಬದುಕಿನ ಆಧಾರವೇ ಕುಸಿದಿರುವ ಈ ಸಂಕಷ್ಟದ ವೇಳೆಯಲ್ಲಿ, ಹೆಕ್ಟೇರ್‌ಗೆ ₹22,500 ಎಂಬ ಹಳೆಯ ಮಾನದಂಡದ ಆಧಾರದ ಮೇಲೆ ಲೆಕ್ಕ ಹಾಕಿದರೆ ಪ್ರತಿ ಮರಕ್ಕೆ ಸರಾಸರಿ ₹16 ಮಾತ್ರ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪರಿಹಾರವಲ್ಲ, ಅನ್ನದಾತನ ಸ್ವಾಭಿಮಾನಕ್ಕೆ ಎಸೆಯುತ್ತಿರುವ ಅವಮಾನ.
₹16ಕ್ಕೆ ಇಂದು ಒಂದು ಕಪ್ ಚಹಾವೂ ಸಿಗುವುದಿಲ್ಲ. ಆದರೆ ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಮರ ನೆಲಕ್ಕುರುಳಿದಾಗ ಅದರ ಮೌಲ್ಯವನ್ನು ₹16ಕ್ಕೆ ಇಳಿಸುವುದು ರೈತರ ಕಣ್ಣೀರಿನೊಂದಿಗೆ ಚೆಲ್ಲಾಟವಾಡಿದಂತೆಯೇ ಸರಿ. ಇನ್ನೂ 20 ವರ್ಷಗಳ ಹಿಂದಿನ ಹಳೆಯ, ಓಬಿರಾಯನ ಕಾಲದ ಪರಿಹಾರ ನಿಯಮಗಳನ್ನೇ ಮುಂದುವರಿಸಿಕೊಂಡು ರೈತರ ಬದುಕಿನೊಂದಿಗೆ ಆಟವಾಡುತ್ತಿರುವುದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಮನೋಭಾವಕ್ಕೆ ಸಾಕ್ಷಿ. ಕೃಷಿ ವೆಚ್ಚ ಹಲವು ಪಟ್ಟು ಏರಿದೆ, ಆದರೆ ಸರ್ಕಾರದ ಪರಿಹಾರ ಮಾತ್ರ ಹಳೆಯ ಕಾಲದಲ್ಲೇ ಸಿಲುಕಿಕೊಂಡಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಅದೂ ಸಾಲದೆಂಬಂತೆ ಶೇ.33ಕ್ಕಿಂತ ಹೆಚ್ಚು ಬೆಳೆಹಾನಿಯಾದವರಿಗೆ ಮಾತ್ರ ಪರಿಹಾರ, ಶೇ.33ಕ್ಕಿಂತ ಕಡಿಮೆ ಹಾನಿಯಾದರೆ 100 ಮರಗಳಿಗೆ ಕೇವಲ ₹2,500 ಎಂಬ ಅವೈಜ್ಞಾನಿಕ ಮಾನದಂಡ! ಇದು ಪರಿಹಾರವಲ್ಲ, ರೈತರ ನೋವಿನ ಮೇಲೆ ಕ್ರೂರ ಹಾಸ್ಯ. ಗ್ಯಾರೆಂಟಿ ಅನುಷ್ಠಾನ ಸಮಿತಿಗಳು, ಭಾರತ ಜೋಡೊ ಕ್ಲಬ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸುರಿಯುವ ಕಾಂಗ್ರೆಸ್ ಸರ್ಕಾರಕ್ಕೆ, ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ಅಡಿಕೆ ಬೆಳೆಗಾರರಿಗೆ ನ್ಯಾಯಯುತ ಪರಿಹಾರ ನೀಡಲು ಹಣವಿಲ್ಲವೇ? ಎಂದು ಅಶೋಕ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಈ ಹಳೆಯ, ರೈತ ವಿರೋಧಿ ಪರಿಹಾರ ಮಾನದಂಡಗಳನ್ನು ತಕ್ಷಣವೇ ಪರಿಷ್ಕರಿಸಿ, ಭದ್ರಾವತಿ-ಹೊಳೆಹೊನ್ನೂರು ಭಾಗದ ಅಡಿಕೆ ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಗ್ರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅನ್ನದಾತನನ್ನು ಅವಮಾನಿಸುತ್ತಾ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಭಾವಿಸಬೇಡಿ ಮುಖ್ಯಮಂತ್ರಿಗಳೇ. ರೈತರ ತಾಳ್ಮೆಯನ್ನು ಪರೀಕ್ಷಿಸಿದ ಯಾವ ಸರ್ಕಾರವೂ ಉಳಿದಿಲ್ಲ. ಮಲೆನಾಡಿನ ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಉತ್ತರಿಸಲೇಬೇಕಾದ ದಿನ ದೂರವಿಲ್ಲ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.




