Haveri News: ಹಾವೇರಿ: ಸವಣೂರು ತಾಲೂಕಿನ ಹುಲಗೂರಿನ ಭಾವೈಕ್ಯತೆಯ ಸ್ಥಳ ಹಜರೇಷಾ ಖಾದ್ರಿ ದರ್ಗಾಕ್ಕೆ ಉರುಸು ವೇಳೆಯಲ್ಲಿ ಲಕ್ಷಾಂತರ ಭಕ್ತರು ಬರುವ ಉದ್ದೇಶದಿಂದ ವಿದ್ಯುತ್ ದೀಪಗಳ ಪೂರೈಕೆ ಮಾಡಲಾಗುತ್ತಿದೆ. ಹೆಸ್ಕಾಂ ಇಲಾಖೆಯಿಂದ 12 ಲಕ್ಷ ವೆಚ್ಚದಲ್ಲಿ ನೂತನ ವಿದ್ಯುತ್ ದೀಪಗಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ .ಎಸ್. ಖಾದ್ರಿ ಹೇಳಿದ್ದಾರೆ.
ತಾಲೂಕಿನ ಹುಲಗೂರ ಗ್ರಾಮದ ಹಜರೇಷಾ ಖಾದ್ರಿ ದರ್ಗಾದಲ್ಲಿ ವಿದ್ಯುತ್ ದೀಪಗಳ ಸಂಪರ್ಕ ಕಾರ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಖಾದ್ರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿರುವ ಅವರು, ಸುಮಾರು ವರ್ಷಗಳಿಂದ ಇಲ್ಲಿನ ಕೇಬಲ್‌ಗಳು ಹಾಗೂ ತಂತಿಗಳು ಶಿಥಿಲಾವಸ್ಥೆಗೆ ತಲುಪಿದ್ದವು, ಹೆಸ್ಕಾಂ ಅಧ್ಯಕ್ಷನಾದ ಮೇಲೆ ನಮ್ಮ ಇಲಾಖೆಯಿಂದ 11 ಮೀಟರ್ ಕಂಬ, ತಂತಿ ಮತ್ತು ಕೇಬಲ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಸಚಿವ ಸತೀಶ ಜಾರಕಿಹೊಳಿಯವರು 6 ಲೈನ್‌ನ ರಸ್ತೆಯ ಸಲುವಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ ಅದಕ್ಕೆ ಕೆಲವರು ಅಡತಡೆ ಮಾಡುತ್ತಿದ್ದಾರೆ ಎಂದು ಖಾದ್ರಿ ಹೇಳಿದ್ದಾರೆ.
ನಮಗೆ ಯಾವುದೇ ಮುಚ್ಚಿಟ್ಟು ಅಭಿವೃದ್ಧಿ ಮಾಡುವ ಭಾವೈಕ್ಯತೆಯ ಪ್ರಮೇಯವಿಲ್ಲ, ಕೆಲ ಜನಪ್ರತಿನಿಧಿಗಳು ಅಡ್ಡಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಹಣ ತಂದಿದ್ದೇವೆಂದು ತಿಳಿದು ರಾತ್ರೋರಾತ್ರಿ 50 ಲಕ್ಷಗಳನ್ನು ಬದಲಾಯಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ. ನಮ್ಮ ಅಣ್ಣನವರನ್ನು ಕೋರ್ಟಿಗೆ ಎಳೆದಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಟೀಕಿಸಿದ್ದಾರೆ.




