ಬೆಂಗಳೂರಿನಲ್ಲಿ ನೀಟ್ ಅಕ್ರಮದ ಹೆಸರಿನಲ್ಲಿ ನಡೆದ ಜಟಾಪಟಿ ಇದೀಗ ನೆಕ್ಸ್ಟ್ ಲೆವೆಲ್ಗೆ ತಲುಪಿದೆ. ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತದ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಬೆಂಕಿ ಕಾರಿದ್ದಾರೆ. ಈ ಘಟನೆಯು ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕೆಪಿಸಿಸಿ ಕಚೇರಿ ಮೇಲೆ ತಕ್ಷಣವೇ ಪೊಲೀಸರು ದಾಳಿ ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್, ‘ಪ್ರತಿಭಟನಾ ಸ್ಥಳದಲ್ಲಿ 15ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್ಸಿಗಳಿದ್ದರೂ ನಮಗೆ ಸೂಕ್ತ ಭದ್ರತೆ ಸಿಗಲಿಲ್ಲ ಎಂದರೆ ಇನ್ನು ಸಾಮಾನ್ಯ ಜನರ ಗತಿಯೇನು?’ ಎಂದು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ. ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ನಮ್ಮ ಪ್ರಾಣಕ್ಕೆ ಏನಾದರೂ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ನಾಯಕರು, ಇದನ್ನು ಖಂಡಿಸಿ ಕಮಿಷನರ್ ಕಚೇರಿಯತ್ತ ಪಾದಯಾತ್ರೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ ಆರ್. ಅಶೋಕ್, ‘ಇದು ಗೂಂಡಾ ಸಿಎಂ ಮತ್ತು ಗೂಂಡಾ ಸರ್ಕಾರ. ಪ್ರತಿಭಟನೆಗೆ ಲಾಂಗ್, ಚಾಕು ಹಾಗೂ ಮೊಟ್ಟೆಗಳನ್ನು ತರಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಬರೀ ಮೊಟ್ಟೆ ಮಾತ್ರ ಇದೆಯೋ ಅಥವಾ ಚಾಕು, ಬಾಂಬ್ಗಳೂ ಇವೆಯೋ ಎಂಬ ಬಗ್ಗೆ ಪೊಲೀಸರು ತಕ್ಷಣವೇ ಕೆಪಿಸಿಸಿ ಕಚೇರಿ ಮೇಲೆ ರೈಡ್ ಮಾಡಿ ತನಿಖೆ ನಡೆಸಬೇಕು’ ಎಂದು ಸವಾಲು ಹಾಕಿದ್ದಾರೆ.
ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, ‘ಪಾಕ್ ಏಜೆಂಟರು ಇಂದು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸರ್ಕಾರ ಪಾಕಿಸ್ತಾನಿ ಬೆಂಬಲಿಗರಿಗೆ ಪ್ರೋತ್ಸಾಹ ನೀಡುತ್ತಿದೆ. ಸಿಸಿಟಿವಿ ಫುಟೇಜ್ಗಳಲ್ಲಿ ಪ್ರತಿಯೊಂದು ದೃಶ್ಯವೂ ದಾಖಲಾಗಿದೆ. ಶಾಸಕರ ಮೇಲೆ ಮೊಟ್ಟೆ ಎಸೆದ ಗೂಂಡಾಗಳನ್ನು ತಕ್ಷಣವೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಕಾಂಗ್ರೆಸ್ ಅಧ್ಯಕ್ಷರು ಈ ಕೂಡಲೇ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯು ಗೂಂಡಾಗಳ ಆಫೀಸ್ ಆಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ‘ನಾವೇನಾದರೂ ಈ ರೀತಿ ಮೊಟ್ಟೆ ಹೊಡೆದ್ವಾ ಅಥವಾ ಚಾಕು ಲಾಂಗ್ ತೋರಿಸಿದ್ವಾ?’ ಎಂದು ಆಕ್ರೋಶ ಹೊರಹಾಕಿದರು. ಒಟ್ಟಿನಲ್ಲಿ, ನೀಟ್ ಪ್ರತಿಭಟನೆ ವೇಳೆ ನಡೆದ ಈ ಮೊಟ್ಟೆ ಎಸೆತದ ಘಟನೆಯು ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬೃಹತ್ ಮಟ್ಟದ ಸಮರಕ್ಕೆ ದಾರಿ ಮಾಡಿಕೊಟ್ಟಿದೆ.




