ಯುಪಿಯಲ್ಲಿ ಮತ್ತೆ ‘ಇಂಡಿಯಾ’ ಸೀಟು ಕಿರಿಕ್: ರಾಹುಲ್-ಅಖಿಲೇಶ್ ಮೈತ್ರಿಗೆ 2027ರ ಎಲೆಕ್ಷನ್ ಸವಾಲು!

2024ರ ಲೋಕಸಭಾ ಚುನಾವಣೆಯಲ್ಲಿ ‘ಯುಪಿ ಕೆ ಲಡ್ಡೆ’ ಎಂದೇ ಸೌಂಡ್ ಮಾಡಿದ್ದ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಜೋಡಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಟಕ್ಕರ್ ನೀಡಿ, ಬರೋಬ್ಬರಿ 43 ಸೀಟುಗಳನ್ನು ಗೆದ್ದು ಬೀಗಿತ್ತು. ಆದರೆ, ಮುಂಬರುವ 2027ರ ಯುಪಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ‘ಇಂಡಿಯಾ’ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಗೊಂದಲಗಳು ಮತ್ತೆ ತಲೆದೋರಿವೆ. ‘ಬಿಜೆಪಿ ವಿರುದ್ಧ ಗೆಲ್ಲಲು ನಾನು ಎಂಥದ್ದೇ ತ್ಯಾಗಕ್ಕೂ ಸಿದ್ಧ’ ಎಂದಿದ್ದ ರಾಹುಲ್ ಒಂದೆಡೆಯಾದರೆ, ‘ಕಾಂಗ್ರೆಸ್ ದೊಡ್ಡ ಮನಸ್ಸು ಮಾಡಬೇಕು’ ಎಂದಿದ್ದ ಅಖಿಲೇಶ್ ಇನ್ನೊಂದೆಡೆ ಇದ್ದು, ಅಷ್ಟಕ್ಕೂ ಆ ‘ದೊಡ್ಡ ಮನಸ್ಸು’ ಮಾಡುವವರು ಯಾರು ಎಂಬ ಚರ್ಚೆ ಈಗ ಜೋರಾಗಿದೆ.

ರಾಹುಲ್ ಗಾಂಧಿ ಈ ವಿಷಯದಲ್ಲಿ ಮೃದು ಧೋರಣೆ ತಳೆದಿದ್ದರೂ, ಯುಪಿ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಅಖಿಲೇಶ್ ಯಾದವ್ ಪಡೆ ಮೇಲೆ ಭಾರಿ ಒತ್ತಡ ಹೇರುತ್ತಿದ್ದಾರೆ. 2027ರಲ್ಲಿ ಸಮಾಜವಾದಿ ಪಾರ್ಟಿ (SP) ಅಧಿಕಾರಕ್ಕೆ ಬರಬೇಕಾದರೆ ಕಾಂಗ್ರೆಸ್‌ಗೆ ಅರ್ಹ ಗೌರವ ಸಿಗಬೇಕು ಹಾಗೂ ಕನಿಷ್ಠ 50:50 ರೇಷಿಯೋದಲ್ಲಿ ಸೀಟು ಹಂಚಿಕೆಯಾಗಬೇಕು ಎಂದು ರಾಜ್ಯ ನಾಯಕರಾದ ರಾಜೇಶ್ ತಿವಾರಿ ಹಾಗೂ ರಾಜೇಂದ್ರ ಪಾಲ್ ಗೌತಮ್ ವಾದಿಸುತ್ತಿದ್ದಾರೆ. ಆದರೆ, ಇದಕ್ಕೆ ಕೌಂಟರ್ ಕೊಡುತ್ತಿರುವ ಎಸ್ಪಿ ನಾಯಕರು, ರಾಜ್ಯದಲ್ಲಿ ತಾವೇ ‘ಬಿಗ್ ಬ್ರದರ್’ ಎಂದು ಪ್ರತಿಪಾದಿಸುತ್ತಿದ್ದಾರೆ.

ಉಭಯ ಪಕ್ಷಗಳ ನಡುವೆ ಅಂಕಿ-ಅಂಶಗಳ ಸಮರವೇ ನಡೆಯುತ್ತಿದೆ. ‘2014 ಮತ್ತು 2019ರ ಲೋಕಸಭೆಯಲ್ಲಿ ಎಸ್ಪಿ ಗೆದ್ದಿದ್ದು ಬರಿ 5 ಸೀಟು, ಆದರೆ 2024ರಲ್ಲಿ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಿಮಗೇ 37 ಸೀಟುಗಳು ಸಿಕ್ಕವು’ ಎಂದು ಕಾಂಗ್ರೆಸ್ ನೆನಪಿಸುತ್ತಿದೆ. ಇದಕ್ಕೆ ತಿರುಗೇಟು ನೀಡುತ್ತಿರುವ ಅಖಿಲೇಶ್ ಪಡೆ, ‘2022ರ ಯುಪಿ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗಳಿಸಿದ್ದು ಕೇವಲ ಶೇ. 2.33 ವೋಟ್ ಶೇರ್ ಮತ್ತು ಬರಿ 2 ಸೀಟುಗಳು ಮಾತ್ರ’ ಎಂದು ಸವಾಲು ಹಾಕುತ್ತಿದೆ.

ಈ ಹಿಂದೆ ಹರಿಯಾಣದಲ್ಲಿ ಕಾಂಗ್ರೆಸ್-ಎಎಪಿ ಸೀಟು ಹಂಚಿಕೆ ಆಗದೆ ಬೇರೆ ಬೇರೆಯಾಗಿ ಸ್ಪರ್ಧಿಸಿ ಮತಗಳು ವಿಭಜನೆಯಾಗಿ ಬಿಜೆಪಿ ಗೆದ್ದಿತ್ತು. ಬಿಹಾರ ಮತ್ತು ಮಧ್ಯಪ್ರದೇಶದಲ್ಲೂ ಮೈತ್ರಿಕೂಟದ ಗೊಂದಲಗಳಿಂದ ಹಿನ್ನಡೆಯಾಗಿತ್ತು. ಇದೀಗ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಡೆ, ಮೈತ್ರಿಕೂಟದ ಈ ಸೀಟು ಜಗಳವನ್ನೇ ಅಸ್ತ್ರ ಮಾಡಿಕೊಂಡು ದಾಳಿ ನಡೆಸಲು ಕಾಯುತ್ತಿದೆ. ‘ಚುನಾವಣೆಗೂ ಮುನ್ನವೇ ಸೀಟಿಗಾಗಿ ಜಗಳವಾಡುವವರು ಸರ್ಕಾರ ಹೇಗೆ ನಡೆಸುತ್ತಾರೆ?’ ಎಂಬ ಸಂದೇಶ ಜನರಿಗೆ ತಲುಪಿದರೆ ಮೈತ್ರಿಗೆ ಭಾರಿ ಹೊಡೆತ ಬೀಳುವುದು ಖಚಿತ.

ಒಟ್ಟಿನಲ್ಲಿ, ಯುಪಿಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಕೆಮಿಸ್ಟ್ರಿ ಯಶಸ್ವಿಯಾಗಬೇಕಾದರೆ ಕೇವಲ ರಾಹುಲ್-ಅಖಿಲೇಶ್ ಅವರ ಸ್ನೇಹವಷ್ಟೇ ಸಾಲದು. ಹೈಕಮಾಂಡ್ ತಕ್ಷಣವೇ ಸ್ಥಳೀಯ ನಾಯಕರನ್ನು ನಿಯಂತ್ರಿಸಿ ಸೂಕ್ತ ಸೀಟು ಹಂಚಿಕೆ ಫಾರ್ಮುಲಾ ಕಂಡುಕೊಳ್ಳಬೇಕಿದೆ.

About The Author