ಅ*ತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಾರಾಗೃಹ ಇಲಾಖೆಯಿಂದ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ನಿಯಮಗಳ ಪ್ರಕಾರ ಪ್ರಜ್ವಲ್ ರೇವಣ್ಣಗೆ ಯಾವುದೇ ಕಾರಣಕ್ಕೂ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದೆ.
ಮನೆಯಲ್ಲಿ ನಡೆಯಲಿದ್ದ ಪುಣ್ಯ ತಿಥಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಜ್ವಲ್ ರೇವಣ್ಣ ಅವರನ್ನು ಹೊರಗೆ ಕರೆತರಲು ಅವರ ಕುಟುಂಬಸ್ಥರು ಪ್ರಯತ್ನ ನಡೆಸಿದ್ದರು. ಬರೋಬ್ಬರಿ 15 ದಿನಗಳ ಕಾಲ ಪೆರೋಲ್ ನೀಡುವಂತೆ ಕಾರಾಗೃಹ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅ*ತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ಪೆರೋಲ್ ಮಾಡುವ ಅಧಿಕಾರ ವ್ಯಾಪ್ತಿ ತಮಗೆ ಬರುವುದಿಲ್ಲ ಎಂದು ಜೈಲು ಅಧಿಕಾರಿಗಳು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ಕಾರಾಗೃಹ ಇಲಾಖೆಯಿಂದ ಪೆರೋಲ್ ಸಿಗುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಪ್ರಜ್ವಲ್ ಕುಟುಂಬಸ್ಥರು ಈಗ ನ್ಯಾಯಾಲಯದ ಬಾಗಿಲು ತಟ್ಟಲು ಸಿದ್ಧತೆ ನಡೆಸಿದ್ದಾರೆ. ಮುಂಬರುವ 30ನೇ ತಾರೀಖಿನಂದು ಪುಣ್ಯ ತಿಥಿ ಕಾರ್ಯಕ್ರಮ ನಿಗದಿಯಾಗಿದ್ದು, ಕೋರ್ಟ್ನಿಂದ ಮಧ್ಯಂತರ ರಿಲೀಫ್ ಸಿಕ್ಕರೆ ಬೇರೊಂದು ದಿನದಲ್ಲಾದರೂ ಪ್ರಜ್ವಲ್ ಅವರನ್ನು ಸಮಾಧಿಯ ಬಳಿ ಕರೆದುಕೊಂಡು ಹೋಗಿ ಪೂಜೆ ನೆರವೇರಿಸುವ ಯೋಚನೆಯಲ್ಲಿದೆ ಕುಟುಂಬ.
ಇದೇ ವೇಳೆ, ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೋರ್ಟ್ನಿಂದ ಸಣ್ಣ ಸಮಾಧಾನಕರ ಸುದ್ದಿ ಸಿಕ್ಕಿದೆ. ಸಜಾ ಬಂಧಿಯಾಗಿರುವ ಅವರನ್ನು ಭೇಟಿಯಾಗಲು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ‘ಒಳ ಸಂದರ್ಶನ’ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶದಂತೆ ಜೈಲು ಮುಖ್ಯ ಅಧೀಕ್ಷಕರು ಕಾರಾಗೃಹ ನಿಯಮಾವಳಿಗಳಿಗೆ ಅನುಗುಣವಾಗಿ ಪ್ರಜ್ವಲ್ ಭೇಟಿಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಭೇಟಿಯ ಸಮಯದಲ್ಲಿ ಕಾರಾಗೃಹದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ಭೇಟಿಗೆ ಅವಕಾಶ ನಿರಾಕರಿಸಿದರೆ ಅದಕ್ಕೆ ತಕ್ಕ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ಅಪರಾಧಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಒಟ್ಟಿನಲ್ಲಿ, ಜೈಲಿನಲ್ಲಿ ಒಳ ಸಂದರ್ಶನದ ಅವಕಾಶ ಸಿಕ್ಕಿದ್ದರೂ, ಪೆರೋಲ್ ನಿರಾಕರಣೆಯಾಗಿರುವುದು ಪ್ರಜ್ವಲ್ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.




