ನೀವೇನಾದ್ರೂ ಹೊಸ ಮನೆಗೆ ಬಾಡಿಗೆಗೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಸರ್ಕಾರದ ಜನಪ್ರಿಯ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ನಿಮಗೆ ಸಿಗದೇ ಹೋಗಲು ಇಲ್ಲೊಂದು ಸಣ್ಣ ಕಾರಣವಿದೆ. ಬಾಡಿಗೆದಾರರಿಗೆ ಹೆಚ್ಚಾಗಿ ತಿಳಿದಿಲ್ಲದ ಈ ನಿಯಮದಿಂದಾಗಿ ನಿಮ್ಮ ಕೈಗೆ ಬರಬೇಕಿದ್ದ ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪಿ ಹೋಗುವ ದೊಡ್ಡ ಸಾಧ್ಯತೆಯಿದೆ. ಹಾಗಾಗಿ ಮನೆ ಬದಲಾಯಿಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳುವುದು ಅತ್ಯಂತು ಅವಶ್ಯಕವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ‘ಗೃಹಜ್ಯೋತಿ’ ಕೂಡ ಒಂದಾಗಿದ್ದು, ಅರ್ಹ ಪ್ರತಿ ಮನೆಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವುದು ಇದರ ಮುಖ್ಯ ಉದ್ದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮನೆ ಬದಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹೊಸ ಮನೆಗೆ ಶಿಫ್ಟ್ ಆದಮೇಲೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋದಾಗ ಅನೇಕರಿಗೆ ಅನಿರೀಕ್ಷಿತ ಶಾಕ್ ಕಾಯುತ್ತಿರುತ್ತದೆ.
ಏಕೆಂದರೆ, ಈ ಯೋಜನೆಯ ಅರ್ಹತೆಯನ್ನು ನಿರ್ಧರಿಸುವಾಗ ಆ ವಿದ್ಯುತ್ ಮೀಟರ್ನ ಹಿಂದಿನ ಬಳಕೆಯ ವಿವರಗಳಿಗೂ ತುಂಬಾನೇ ಮಹತ್ವ ನೀಡಲಾಗುತ್ತದೆ. ಅಂದರೆ, ಆ ಮೀಟರ್ನ ಹಿಂದಿನ 12 ತಿಂಗಳ ಅಥವಾ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ಗಿಂತ ಹೆಚ್ಚಿದ್ದರೆ, ಆ ಸಂಪರ್ಕಕ್ಕೆ ಗೃಹಜ್ಯೋತಿ ಲಾಭ ದೊರೆಯುವುದಿಲ್ಲ. ಹೊಸ ಬಾಡಿಗೆದಾರರ ಬಳಕೆ ಕಡಿಮೆ ಇದ್ದರೂ, ಹಿಂದೆ ಆ ಮನೆಯಲ್ಲಿ ವಾಸವಿದ್ದವರು ವಿಪರೀತ ವಿದ್ಯುತ್ ಬಳಸಿದ್ದರೆ ವಾರ್ಷಿಕ ಸರಾಸರಿ 200 ಯೂನಿಟ್ ದಾಟಿರುತ್ತದೆ.
ಮನೆ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಅನೇಕ ಮಾಲೀಕರು ವಿದ್ಯುತ್ ಮೀಟರ್ ಹಿಸ್ಟರಿ ಅಥವಾ ಗೃಹಜ್ಯೋತಿ ಅರ್ಹತೆಯ ಬಗ್ಗೆ ಬಾಡಿಗೆದಾರರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಪರಿಣಾಮ, ಉಚಿತ ಕರೆಂಟ್ ಸಿಗುತ್ತದೆ ಎಂದುಕೊಂಡು ಬಂದು ಮೋಸಹೋಗುವಂತಾಗುತ್ತದೆ. ಇದಕ್ಕೆ ಪರಿಹಾರವಾಗಿ, ಹೊಸ ಮನೆಗೆ ಹೋಗುವ ಮುಂಚೆ ಮಾಲೀಕರ ಬಳಿ ಹಿಂದಿನ ವಿದ್ಯುತ್ ಬಿಲ್ಗಳನ್ನು ಪರಿಶೀಲಿಸುವುದು, ಮೀಟರ್ಗೆ ಈಗಾಗಲೇ ಗೃಹಜ್ಯೋತಿ ಸಿಗುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಬೆಸ್ಕಾಂ ಕಚೇರಿಯಿಂದ ಮಾಹಿತಿ ಪಡೆಯುವುದು ಉತ್ತಮ.
ಹೊಸ ಬಾಡಿಗೆದಾರರ ಬಳಕೆಯನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಸರ್ಕಾರ ಹಾಗೂ ಬೆಸ್ಕಾಂ ಕಡೆಯಿಂದಲೂ ಸ್ಪಷ್ಟ ಮಾರ್ಗಸೂಚಿಗಳು ಬರಬೇಕು ಎಂಬ ಒತ್ತಾಯ ಗ್ರಾಹಕ ಸಂಘಟನೆಗಳಿಂದ ಕೇಳಿಬರುತ್ತಿದೆ. ಆದ್ದರಿಂದ ನೀವು ಮುಂದಿನ ದಿನಗಳಲ್ಲಿ ಮನೆ ಬದಲಾಯಿಸುವಾಗ, ಬರೀ ಬಾಡಿಗೆ ಮತ್ತು ಅಡ್ವಾನ್ಸ್ ಜೊತೆಗೆ ಆ ವಿದ್ಯುತ್ ಮೀಟರ್ನ ಹಿಂದಿನ ಇತಿಹಾಸವನ್ನೂ ಒಮ್ಮೆ ಕಡ್ಡಾಯವಾಗಿ ಚೆಕ್ ಮಾಡಿಕೊಳ್ಳಿ, ಇಲ್ಲವಾದರೆ ದುಬಾರಿ ಕರೆಂಟ್ ಬಿಲ್ ಕಟ್ಟಿ ಪರದಾಡಬೇಕಾಗುತ್ತದೆ.




