ಜಪಾನ್‌ನಲ್ಲಿ 7.1 ತೀವ್ರತೆಯ ಭೀಕರ ಭೂಕಂಪ – ಸುನಾಮಿ ಎಚ್ಚರಿಕೆ ಜಾರಿ!

ಜಪಾನ್ ದೇಶದಲ್ಲಿ ಮತ್ತೊಮ್ಮೆ ಭೀಕರ ಭೂಕಂಪ ಸಂಭವಿಸಿದ್ದು, ಭೂಮಿಯ ತೀವ್ರ ಕಂಪನದಿಂದ ಜನ ನಡುಗಿಹೋಗಿದ್ದಾರೆ. ಈ ಪ್ರಕೃತಿ ವಿಕೋಪದಿಂದ ಇಡೀ ಜಗತ್ತಿನಲ್ಲಿ ಮತ್ತೊಮ್ಮೆ ಆತಂಕದ ನೆರಳು ಕವಿದಿದೆ. ಜಪಾನ್‌ನ ದಕ್ಷಿಣ ಭಾಗದಲ್ಲಿ ಬರೋಬ್ಬರಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯಲ್ಲಿ ಈ ಪ್ರಬಲ ಭೂಕಂಪ ಅಪ್ಪಳಿಸಿದೆ ಎಂದು ಅಧಿಕೃತ ಮೂಲಗಳಿಂದ ವರದಿಯಾಗಿದೆ.

ಜಪಾನ್‌ನ ದಕ್ಷಿಣ ಭಾಗದ ಪ್ರಮುಖ ದ್ವೀಪವಾದ ಕ್ಯುಶುನ ‘ಕುಮಾಮೊಟೊ’ ಪ್ರದೇಶದಲ್ಲಿ ಮಂಗಳವಾರ ತಡಸಂಜೆ ಈ ಭಾರಿ ಭೂಕಂಪ ಸಂಭವಿಸಿದೆ. ಜಪಾನ್ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಇದರ ತೀವ್ರತೆ ಬರೋಬ್ಬರಿ 7.1 ರಷ್ಟು ದಾಖಲಾಗಿದ್ದು, ಸದ್ಯ ಈ ವಿಷಯ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜನತೆ ದಿಕ್ಕು ತೋಚದೆ ಆತಂಕದಲ್ಲಿದ್ದಾರೆ.

ಈ ಭೂಕಂಪನದ ಕೇಂದ್ರಬಿಂದು ಸಮುದ್ರದ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಅಥವಾ 6 ಮೈಲಿ ಆಳದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪನದ ತೀವ್ರತೆ ಅತ್ಯಂತ ಹೆಚ್ಚಿದ್ದ ಕಾರಣ ಇಡೀ ಪ್ರದೇಶವೇ ಬೆಚ್ಚಿಬಿದ್ದಿದೆ. ಭೂಕಂಪನದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆ ಗಂಟೆ ಮೊಳಗಿದ್ದು, ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಿರುವಂತೆ ಸುನಾಮಿ ಮುನ್ನೆಚ್ಚರಿಕೆ ಜಾರಿಗೊಳಿಸಲಾಗಿದೆ.

ಇನ್ನು ಅತ್ಯಂತ ಆತಂಕದ ವಿಷಯವೆಂದರೆ, ಈ ಭೂಕಂಪದ ಕೇಂದ್ರಬಿಂದುವು ಕಾರ್ಯಾಚರಣೆಯಲ್ಲಿದ್ದ ಎರಡು ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳ ಹತ್ತಿರವೇ ಇದೆ. ಆದರೂ, ಸ್ಥಳೀಯ ವಿದ್ಯುತ್ ಕಂಪನಿಯಾದ ಕ್ಯುಶು ಎಲೆಕ್ಟ್ರಿಕ್ ಸ್ಪಷ್ಟಪಡಿಸಿದ್ದು, ಸದ್ಯಕ್ಕೆ ಯಾವುದೇ ಪರಮಾಣು ಸ್ಥಾವರಗಳಲ್ಲಿ ಅಸಹಜತೆ ಅಥವಾ ಹಾನಿ ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಇದು ತುಸು ಸಮಾಧಾನ ತಂದಿರುವ ಸಂಗತಿಯಾಗಿದೆ.

ಪ್ರಕೃತಿಯ ಈ ಕರಾಳ ವಿಕೋಪದಿಂದ ಜಪಾನ್ ಜನತೆ ಸಂಪೂರ್ಣ ಸುರಕ್ಷಿತವಾಗಿರಲಿ ಎಂದು ಆಶಿಸೋಣ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಕುರಿತಾದ ನಿಖರ ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಅಧಿಕೃತವಾಗಿ ಹೊರಬರಬೇಕಿದೆ.

About The Author