ಒಂದು ಮೊಟ್ಟೆಯ ಕಥೆ ಹೇಳಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್: ಸರ್ಕಾರದ ವಿರುದ್ಧ ವಾಗ್ದಾಳಿ

Political News: ಸರ್ಕಾರಿ ಶಾಲಾ ಮಕ್ಕಳಿಗೆ ಸರಿಯಾಗಿ ಬಿಸಿಯೂಟ ಮತ್ತು ಮೊಟ್ಟೆ ನೀಡುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದವರು ವಾಗ್ದಾಳಿ ನಡೆಸಿರುವ ಬೆನ್ನಲ್ಲೇ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಒಂದು ಮೊಟ್ಟೆಯ ಕಥೆ ಹೇಳಿದ್ದಾರೆ.

ಅಂದ್ರೆ ನಿಖಿಲ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇವರು ನೀಡಿದ್ರೂ ಪೂಜಾರಿ ಬಿಡಾ ಅಂದಹಾಗೆ, ಶಾಲಾ ಮಕ್ಕಳಿಗೆ ಆಹಾರ ನೀಡಲು ಅಜೀಂ ಪ್ರೇಮ್‌ಜಿ ಸಂಸ್ಥೆ ಕೋಟಿ ಕೋಟಿ ಹಣ ನೀಡಿದ್ರೂ , ಸರ್ಕಾರ ಮಾತ್ರ ಶಾಲಾ ಮಕ್ಕಳಿಗೆ ಸರಿಯಾಗಿ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ.

ಶಾಲಾ ಮಕ್ಕಳಿಗೆ 6 ದಿನ ಉಚಿತ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಂಸ್ಥೆಯೇ ₹1,500 ಕೋಟಿ ನೀಡುತ್ತಿದೆ. ಹೀಗಿದ್ದರೂ, ಯೋಜನೆಗೆ ಸರಿಯಾದ ಆಡಳಿತಾತ್ಮಕ ಬೆಂಬಲ ನೀಡಲಾಗದಷ್ಟು ಈ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆಯೇ? ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ₹7.50-8 ತಲುಪಿದ್ದರೆ, ಸರ್ಕಾರ ಕೊಡುವುದು ಕೇವಲ ₹6! ಎಂದು ನಿಖಿಲ್ ಕುಮಾರ್ ಕಿಡಿಕಾರಿದ್ದಾರೆ.

ಹೆಚ್ಚುವರಿ ವೆಚ್ಚವನ್ನು ನಮ್ಮ ಗೌರವಾನ್ವಿತ ಶಿಕ್ಷಕರು ತಮ್ಮ ಸ್ವಂತ ಸಂಬಳದಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಭರಿಸುತ್ತಿದ್ದಾರೆ. ದಾನಿಗಳು ಸಾವಿರಾರು ಕೋಟಿ ಕೊಟ್ಟರೂ ಯೋಜನೆಯನ್ನು ಸರಿ ನಡೆಸಲಾಗದ ಇದು ಕೇವಲ ವೈಫಲ್ಯವಲ್ಲ, ಸಂಪೂರ್ಣ ‘ಆಡಳಿತಾತ್ಮಕ ದಿವಾಳಿತನ’! ಎಂದು ನಿಖಿಲ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

About The Author