Hubli News: ಕ್ಯಾನ್ಸರ್ ಪೀಡಿತ ಮಹಿಳೆ ಮನೆ CCTV ಧ್ವಂಸ – FIR ದಾಖಲು

Hubli News: ಹುಬ್ಬಳ್ಳಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯ ಮನೆ ಮೇಲೆಯೇ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮಾನಭಂಗ ಸೇರಿದಂತೆ ಹಲವು ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಈ ಹಿಂದೆ ಪ್ರಕರಣಗಳನ್ನು ಎದುರಿಸಿದ್ದ ಕೆಲವರ ಮೇಲೂ ಮತ್ತೆ ಆರೋಪ ಕೇಳಿಬಂದಿದೆ. ಸದ್ಯ ಸಂತ್ರಸ್ತ ಕುಟುಂಬ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಶರೀನಾ ಭಜಂತ್ರಿ ಕುಟುಂಬಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಹುಬ್ಬಳ್ಳಿಯ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೇ ಧ್ವಂಸಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಭದ್ರತೆಗಾಗಿ ಅಳವಡಿಸಿದ್ದ ಸಿಸಿಟಿವಿಯನ್ನೇ ಹಾನಿಗೊಳಿಸಿರುವ ಆರೋಪದ ಜೊತೆಗೆ, ಮಹಿಳೆಯರ ಮಾನಭಂಗ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಸೌಜನ್ಯ ಗೋಕಾಕ್, ರಾಘವೇಂದ್ರ ಗೋಕಾಕ್, ದೇವೇಂದ್ರ ಬಳ್ಳಾರಿ, ಗೀತಾ ಬಳ್ಳಾರಿ, ಅಜಿತ್ ಬೆಕ್ಕಿನಕಣ್ಣವರ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ, ಪ್ರಕರಣದಲ್ಲಿರುವ ಕೆಲ ಆರೋಪಿಗಳ ವಿರುದ್ಧ ಇದೇ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣಗಳೂ ದಾಖಲಾಗಿವೆ ಎನ್ನಲಾಗಿದೆ. ಈ ಹಿಂದೆ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಕೆಲವರು ಜಾಮೀನಿನ ಮೇಲಿದ್ದಾರೆ ಎಂಬ ಮಾಹಿತಿಯೂ ಇದೆ.

ಹೀಗಾಗಿ, ಜಾಮೀನಿನಲ್ಲಿರುವ ಆರೋಪಿಗಳೇ ಮತ್ತೆ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ? ಜಾಮೀನು ಷರತ್ತು ಉಲ್ಲಂಘನೆಯಾಗಿದೆಯೇ? ಎಂಬ ಪ್ರಶ್ನೆಗಳೂ ಇದೀಗ ಎದುರಾಗಿವೆ.

ಮನೆಯ ಸಿಸಿಟಿವಿ ಧ್ವಂಸ ಪ್ರಕರಣದಿಂದ ಆರಂಭವಾದ ವಿವಾದ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಂತ್ರಸ್ತ ಕುಟುಂಬದ ಆರೋಪಗಳೇನು, ಮತ್ತೊಂದೆಡೆ ಪ್ರಕರಣದ ಆರೋಪಿಗಳ ವಿರುದ್ಧದ ಆರೋಪಗಳು ಎಷ್ಟು ಸತ್ಯ ಎಂಬುದನ್ನು ತನಿಖೆಯೇ ಸ್ಪಷ್ಟಪಡಿಸಬೇಕಿದೆ.

ಈ ನಡುವೆ, ಆರೋಪಿಗಳು ಈ ಹಿಂದೆಯೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಏನಾಗಲಿದೆ ಎಂಬುದರ ಮೇಲೂ ಇದೀಗ ಗಮನ ನೆಟ್ಟಿದೆ.

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಕುಟುಂಬಕ್ಕೆ ಮನೆಯ ಸುರಕ್ಷತೆಯೇ ಪ್ರಶ್ನೆಯಾಗಿರುವ ಆರೋಪ ಕೇಳಿಬಂದಿದೆ. ಸಿಸಿಟಿವಿ ಧ್ವಂಸ, ಮಹಿಳೆಯರ ಮೇಲಿನ ಗಂಭೀರ ಆರೋಪಗಳು ಸೇರಿದಂತೆ ಹಲವು ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಗಳು ಸಾಬೀತಾಗುವವರೆಗೂ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ. ಆದರೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ರಕ್ಷಣೆ ಸಿಗಬೇಕಿದೆ. ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ, ಆರೋಪಗಳ ಸತ್ಯಾಸತ್ಯತೆ ಏನು ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.

ಕ್ಯಾಮೆರಾಮನ್ ಹೇಮಂತ್ ಕುಮಾರ್ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author