Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ.
ದೂರದ ಊರುಗಳಿಂದ ಆಸೆಯನ್ನಿಟ್ಟುಕೊಂಡು ಬರುವ ಬಡ ರೋಗಿಗಳಿಗೆ ಕನಿಷ್ಠ ಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳು ಹಾಗೂ ಸರಿಯಾದ ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಾಗಿದೆ.
ಆಸ್ಪತ್ರೆಯ ಆವರಣದಲ್ಲಿ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ನಡೆಯದೆ, ಚಿಕಿತ್ಸೆಗೆ ಬರುವ ಬಾಣಂತಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ಸೋಂಕು ಹರಡುವ ಭೀಕರ ವಾತಾವರಣ ನಿರ್ಮಾಣವಾಗಿದ್ದು, ನೂತನ 450 ಹಾಸಿಗೆಯ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಇದಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ ನೀರು ಸಂಸ್ಕರಣಾ ಘಟಕದ (STP) ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಬೋಗಸ್ ಬಿಲ್ ಎತ್ತಲಾಗಿದೆ. ತಾಂತ್ರಿಕ ಅನುಮೋದನೆ ಇಲ್ಲದೆ ಕಾಮಗಾರಿ ನಡೆಸಿ, ವಿದ್ಯಾರ್ಥಿಗಳ ಶುಲ್ಕದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
ಆದ್ದರಿಂದ ಈ ಎಲ್ಲಾ ಅಕ್ರಮಗಳು ಹಾಗೂ ಲೋಪದೋಷಗಳಿಗೆ ಕಾರಣರಾದ ಕಿಮ್ಸ್ ನಿರ್ದೇಶಕರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖಾ ಸಮಿತಿಯನ್ನು ರಚಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೊಪ್ಪಳದ ಬಡ ರೋಗಿಗಳಿಗೆ ತಕ್ಷಣವೇ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




