ನಗರದ ಐತಿಹಾಸಿಕ ಕೆ.ಆರ್. ಮಾರ್ಕೆಟ್‌ನಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಬುಧವಾರವೂ ಭರ್ಜರಿಯಾಗಿ ಮುಂದುವರಿಯಿತು. ಸುಮಾರು ನಾಲ್ಕು ಜೆಸಿಬಿ ಯಂತ್ರಗಳ ಸಹಾಯದಿಂದ ಬಿಬಿಎಂಪಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸರ ಬಿಗಿ ಭದ್ರತೆಯಲ್ಲಿ ಅತಿಕ್ರಮಣ ತೆರವುಗೊಳಿಸಿದರು.
ಫುಟ್‌ಪಾತ್ ಮೇಲೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಮತ್ತು ಶಾಶ್ವತ ಅಂಗಡಿಗಳು, ಶೆಡ್‌ಗಳು ಹಾಗೂ ಇತರೆ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆ ವೇಳೆ ಹಲವು ವ್ಯಾಪಾರಿಗಳು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ತಮ್ಮ ಅಂಗಡಿಗಳನ್ನು ತೆರವುಗೊಳಿಸದಂತೆ ಕೋರಿದರು. ಆದರೆ ಅಧಿಕಾರಿಗಳು ಯಾವುದೇ ವಿನಾಯಿತಿ ನೀಡದೆ ಕಾರ್ಯಾಚರಣೆಯನ್ನು ಮುಂದುವರಿಸಿದರು.
ಅಂಗಡಿಗಳು ತೆರವುಗೊಳ್ಳುತ್ತಿದ್ದಂತೆ ಅನೇಕ ವ್ಯಾಪಾರಿಗಳು ಬಿಕ್ಕಿ ಬಿಕ್ಕಿ ಅಳುತ್ತ ತಮ್ಮ ಅಳಲನ್ನು ತೋಡಿಕೊಂಡರು. ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಏಕಾಏಕಿ ತೆರವು ಕಾರ್ಯಾಚರಣೆ ನಡೆಸುವುದರಿಂದ ತಮ್ಮ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಪರ್ಯಾಯ ಸ್ಥಳವನ್ನು ಕಲ್ಪಿಸಿ ನಂತರವೇ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ, ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಶಾಶ್ವತ ಅಂಗಡಿಗಳನ್ನು ನಿರ್ಮಿಸಿ ಕೆಲವರು ಅಕ್ರಮವಾಗಿ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ದುಡಿಯುವವರನ್ನು ಬಳಸಿಕೊಂಡು ಶೋಷಣೆ ನಡೆಸಲಾಗುತ್ತಿದ್ದು, ಫುಟ್‌ಪಾತ್‌ಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಬೇಕು ಎಂದು ಹೇಳಿದರು.
ಜಿಬಿಎ ವತಿಯಿಂದ ಅನುಮತಿ ಪತ್ರ ನೀಡಲಾಗಿದೆ ಎಂಬ ಕೆಲವರ ವಾದವನ್ನು ತಳ್ಳಿಹಾಕಿದ ಸಚಿವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಯಾವುದೇ ಅನುಮತಿ ಪತ್ರ ನೀಡಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂಗಡಿಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ನ್ಯಾಯಾಲಯ ಈಗಾಗಲೇ ಅತಿಕ್ರಮಣ ತೆರವುಗೊಳಿಸಲು ಕಾಲಾವಕಾಶ ನೀಡಿತ್ತು. ನ್ಯಾಯಾಲಯ ಸೂಚಿಸಿದ್ದಕ್ಕಿಂತ ಹೆಚ್ಚಿನ ಅವಕಾಶವನ್ನೇ ಸರ್ಕಾರ ನೀಡಿದ್ದರೂ ಅತಿಕ್ರಮಣ ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾನೂನು ಪ್ರಕಾರವೇ ಈಗ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಾಚರಣೆ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟರು. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಕೆ.ಆರ್. ಮಾರ್ಕೆಟ್‌ನಲ್ಲಿ ಪಾದಚಾರಿಗಳ ಸುಗಮ ಸಂಚಾರ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




