ತಮಿಳುನಾಡಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಟಿವಿಕೆ (TVK) ಸರ್ಕಾರವು ತನ್ನ ಮೊದಲ ಮಹತ್ವಾಕಾಂಕ್ಷೆಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ರಾಜ್ಯ ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು 2026-27ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಸಮಾಜ ಕಲ್ಯಾಣ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಜನಪರ ಕಾಳಜಿ ಮೆರೆದಿದ್ದಾರೆ.
ಈ ಬಜೆಟ್ನಲ್ಲಿ ಜನಸಾಮಾನ್ಯರನ್ನು ಸೆಳೆಯುವ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಭರ್ಜರಿ ಉಡುಗೊರೆಗಳ ಮಹಾಪೂರವೇ ಹರಿದುಬಂದಿದೆ. ‘ಅಣ್ಣನ್ ಸೀರ್ ಯೋಜನೆ’ಯಡಿ ನವವಧುವಿಗೆ ಬರೋಬ್ಬರಿ ಎಂಟು ಗ್ರಾಂ ಚಿನ್ನದ ನಾಣ್ಯ ಹಾಗೂ ರೇಷ್ಮೆ ಸೀರೆ ವಿತರಿಸಲು 812 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಅಷ್ಟೇ ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೂ ‘ತಾಯ್ ಮಾಮನ್ ತಂಗ ಮೋತಿರಂ’ ಯೋಜನೆಯಡಿ ಒಂದು ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು 560 ಕೋಟಿ ರೂ. ಮೀಸಲಿಡಲಾಗಿದೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಟಿವಿಕೆ ಸರ್ಕಾರ ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ವೆಟ್ರಿ ಲ್ಯಾಪ್ಟಾಪ್ ಯೋಜನೆ’ಗೆ ಬರೋಬ್ಬರಿ 2,000 ಕೋಟಿ ರೂಪಾಯಿ ಒದಗಿಸಲಾಗಿದೆ. ಇದರೊಂದಿಗೆ 11ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಜೊತೆಗೆ ಹೆಲ್ಮೇಟ್ ಹಾಗೂ ವಾಟರ್ ಬಾಟಲ್ ನೀಡುವ ‘ಪುದಿಯ ಪಯಣಂ, ಪುದಿಯ ವೇಗಂ’ ನೂತನ ಯೋಜನೆಗೆ 277 ಕೋಟಿ ರೂ. ಕಾಯ್ದಿರಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಗರ್ಭಿಣಿಯರ ಉತ್ತಮ ಆರೈಕೆಗಾಗಿ ಉಚಿತ ಊಟ ಮತ್ತು ವೈದ್ಯಕೀಯ ಸೌಲಭ್ಯಗಳನ್ನೊಳಗс ‘ತಾಯ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ ಹಿರಿಯ ನಾಗರಿಕರಿಗೆ ಹಳ್ಳಿಗಳಲ್ಲೇ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ಒದಗಿಸಲು 1,000 ಸಂಚಾರಿ ವೈದ್ಯಕೀಯ ಘಟಕಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
ಇನ್ನು ಬಜೆಟ್ ಭಾಷಣದ ವೇಳೆ ಕೇಂದ್ರ ಸರ್ಕಾರದ ವೈದ್ಯಕೀಯ ಪ್ರವೇಶಾತಿಗೆ ಇರುವ ‘ನೀಟ್’ (NEET) ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಬದಲಿಗೆ 12ನೇ ತರಗತಿಯ ಅಂಕಗಳ ಆಧಾರದಲ್ಲೇ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಬೇಕೆಂದು ಸಚಿವರು ಕೇಂದ್ರ ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ಟಿವಿಕೆ ಸರ್ಕಾರದ ಈ ಚೊಚ್ಚಲ ಬಜೆಟ್ ರಾಜ್ಯ ರಾಜಕಾರಣದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.




