ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ! – ಹೀಗಂತ ವಾರ್ನಿಂಗ್ ಕೊಟ್ಟಿರೋದು ಬೇರೆ ಯಾರು ಅಲ್ಲ, ಮೈಸೂರು ಜಿಲ್ಲೆ ಟಿ. ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್! ಗಣೇಶ ಹಬ್ಬದ ಮುನ್ನಾ ನಡೆದ ಶಾಂತಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಆಡಿರೋ ಈ ಮಾತುಗಳು ಈಗ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿವೆ.
ಹೌದು, ಶಾಂತಿ ಸಭೆಯಲ್ಲಿ ಮಾತನಾಡಿದ್ದ ಇನ್‌ಸ್ಪೆಕ್ಟರ್ ಧನಂಜಯ್, ‘ಮಸೀದಿ ಮುಂದೆ ಯಾವುದೇ ಕಾರಣಕ್ಕೂ ಗಣೇಶ ಮೆರವಣಿಗೆ ಹೋಗಬಾರದು. ಪಟಾಕಿ ಹೊಡೆದರೆ ನಿಮ್ಮ ಗ್ರಹಚಾರ ಬಿಡಿಸ್ತೀನಿ, ರೂಟ್ ಮ್ಯಾಪ್ ಕೊಟ್ಟು ಮಾತ್ರ ಗಣಪತಿ ಕೂರಿಸಬೇಕು, ಡಿಜೆ ಸೌಂಡ್ ಬಳಸಂಗಿಲ್ಲ’ ಅಂತ ನೇರ ಎಚ್ಚರಿಕೆ ಕೊಟ್ಟಿದ್ರು. ಇನ್‌ಸ್ಪೆಕ್ಟರ್ ಅವರ ಈ ಒರಟು ಧ್ವನಿ ಮತ್ತು ಹಿಂದೂ ಯುವಕರನ್ನು ಹೆದರಿಸುವಂತಹ ಮಾತುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇನ್‌ಸ್ಪೆಕ್ಟರ್ ಧನಂಜಯ್ ಅವರ ಈ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅತಿರೇಕವಾಗಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇನ್‌ಸ್ಪೆಕ್ಟರ್ ಆದವರು ರೋಡ್ ಸೈಡ್ ತರ್ಲೆಯಂತೆ ಮಾತನಾಡಬಾರದು, ಗೌರವಯುತವಾಗಿ ಸಂಯಮದಿಂದ ನಡೆದುಕೊಳ್ಳಬೇಕು. ಇನ್ನೊಮ್ಮೆ ಆ ರೀತಿ ಮಾತನಾಡಿದರೆ ನೇರವಾಗಿ ಪೊಲೀಸ್ ಠಾಣೆಗೇ ನುಗ್ಗುತ್ತೇನೆ’ ಅಂತ ಸವಾಲು ಹಾಕಿದ್ದಾರೆ.
ಶಾಂತಿ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರೋದು ಎಷ್ಟು ಸರಿ? ಒಟ್ಟಿನಲ್ಲಿ ಗಣೇಶ ಹಬ್ಬದ ಸಂಭ್ರಮದ ನಡುವೆ ಟಿ. ನರಸೀಪುರದ ಈ ಇನ್‌ಸ್ಪೆಕ್ಟರ್ ವರ್ಸಸ್ ರಾಜಕಾರಣಿಗಳ ವಾರ್ ಸದ್ಯ ಕರಾವಳಿ ಹಾಗೂ ಮೈಸೂರು ಭಾಗದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ ಅಂತಾನೆ ಹೇಳಬಹುದು.




